ಮುಂಬೈ: 2013ರಲ್ಲಿ ತಮ್ಮ ಮೇಲೆ ನಡೆದ ಲೈಂಗಿಕ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದು, ಇದೀಗ ತಮಗೆ ವೈ ಮಟ್ಟದ ಸೆಕ್ಯುರಿಟಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ ಪತ್ರ ಬರೆದು ನಟಿ ಪಾಯಲ್ ಮನವಿ ಮಾಡಿಕೊಂಡಿದ್ದು, ಆರೋಪಿ ಈಗಲೂ ಫ್ರೀಯಾಗಿದ್ದು, ತಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದಿದ್ದಾರೆ.
ಗೃಹ ಸಚಿವರಿಗೆ ಇವರು ಬರೆದಿರುವ ಪತ್ರವನ್ನ ಪಾಯಲ್ ಪರ ವಕೀಲ ನಿತಿನ್ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ. ಆರೋಪಿಯನ್ನ ಇಲ್ಲಿಯವರೆಗೆ ಬಂಧನ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ (ಮೀಟೂ) ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್, ವೆರ್ಸೋವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕಶ್ಯಪ್ ಅವರಿಗೆ ನೋಟಿಸ್ ನೀಡಿದ್ದರು. ಹೀಗಾಗಿ ಈಗಾಗಲೇ ಕಶ್ಯಪ್ ವಿಚಾರಣೆಗೆ ಹಾಜರಾಗಿದ್ದಾರೆ.
ಇದರ ಬೆನ್ನಲ್ಲೇ ಮುಂಬೈನ ಅಂಧೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಟಿಯನ್ನ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಸೆ.19 ರಂದು ಪಾಯಲ್ ಘೋಷ್ ತನ್ನ ಟ್ವಿಟರ್ ಖಾತೆಯಲ್ಲಿ ಅನುರಾಗ್ ಕಶ್ಯಪ್ ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬರೆದುಕೊಂಡಿದ್ದರು.