ಲೆಜಂಡರಿ ಆ್ಯಕ್ಟರ್, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ತಾವು ಮಾಡುತ್ತಿರುವ ಪಾನ್ ಮಸಾಲಾ ಪ್ರಚಾರದ ಜಾಹೀರಾತಿನಿಂದ ಹೊರಬರಬೇಕು ಎಂದು ರಾಷ್ಟ್ರೀಯ ತಂಬಾಕು ವಿರೋಧಿ ಸಂಘಟನೆ (National Anti-Tobacco Program-NOTE) ಅಧ್ಯಕ್ಷ ಡಾ.ಶೇಖರ್ ಸಲ್ಕರ್ ಒತ್ತಾಯ ಮಾಡಿದ್ದಾರೆ.
ಬಹಿರಂಗ ಪತ್ರ ಬರೆದಿರುವ ಅವರು, ನಟನೆಯ ಜೊತೆಗೆ ಯುವ ಸಮಾಜವನ್ನು ತಿದ್ದಬೇಕಿರುವ ನಟರು ಇಂತಹ ದಾರಿ ತಪ್ಪಿಸುವ ಜಾಹೀರಾತಿನಿಂದ ದೂರವಿರಬೇಕು. ನಟರ ಜಾಹೀರಾತು ನೋಡಿ ಯುವ ಸಮುದಾಯ ಇಂತಹ ಚಟಕ್ಕೆ ಬೀಳಬಹುದು. ಸಮಾಜದ ಒಳಿತಿಗಾಗಿ ಹಲವು ಕಾರ್ಯಕ್ರಮಗಳ ರಾಯಭಾರಿಯಾಗಿರುವ ಅಮಿತಾಭ್, ಪಾನ್ ಮಸಾಲಾ ಜಾಹೀರಾತಿನಿಂದ ಶೀಘ್ರದಲ್ಲೇ ಹೊರಬರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ತಂಬಾಕು ಮತ್ತು ಪಾನ್ ಮಸಾಲಾ ಸೇವನೆಯಿಂದ ಏನೆಲ್ಲ ಸಮಸ್ಯೆ ಅನುಭವಿಸಲಾಗುತ್ತಿದೆ ಅನ್ನೋದರ ಬಗ್ಗೆ ಎಲ್ಲರಿಗೂ ಗೊತ್ತು. ಯುವ ಸಮುದಾಯ ಸಿನಿಮಾ ನಟರನ್ನು ಅನುಸರಿಸುವುದು ಹೆಚ್ಚು. ಹಾಗಾಗಿ ಇಂತಹ ದಾರಿ ತಪ್ಪಿಸುವ ಜಾಹೀರಾತಿನಿಂದ ತಾವು ಹೊರರಬೇಕು. ತಂಬಾಕು ವಿರೋಧಿ ಚಳವಳಿಯ ಅಭಿಯಾನವನ್ನು ಬೆಂಬಲಿಸಬೇಕು ಎಂದು ಡಾ.ಶೇಖರ್ ಸಲ್ಕರ್ ಕೋರಿ ಕೊಂಡಿದ್ದಾರೆ.