ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ಸೋನಿಯಾ ಗಾಂಧಿ ಕ್ಷಮಿಸಿದಂತೆ ನಿಮ್ಮ ಮಗಳನ್ನು ಕೊಂದವರನ್ನೂ ಕ್ಷಮಿಸಿ ಎಂದು ನಿರ್ಭಯಾ ತಾಯಿಗೆ ಸಲಹೆ ನೀಡಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಿರುದ್ಧ ನಟಿ ಕಂಗನಾ ರಣಾವತ್ ಹರಿಹಾಯ್ದಿದ್ದಾರೆ.
ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿದ್ದೇನು?
ಕಳೆದ ವಾರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮುಂದೂಡಿ ದೆಹಲಿ ಹೈಕೋರ್ಟ್ ಆದೇಶ ನೀಡಿದ್ದಕ್ಕೆ ಮೃತ ಸಂತ್ರಸ್ತೆ ನಿರ್ಭಯಾ ತಾಯಿ ಆಶಾ ದೇವಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆಯೇ ಇತ್ತ ಟ್ವೀಟ್ ಮಾಡಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ನಮಗೆ ನಿಮ್ಮ ನೋವು ಅರ್ಥವಾಗುತ್ತದೆ. ನಾವು ನಿಮ್ಮೊಂದಿಗಿದ್ದೇವೆ. ಆದರೆ ಅಪರಾಧಿಗಳಿಗೆ ಮರಣದಂಡನೆ ವಿರೋಧಿಸುತ್ತೇವೆ. ರಾಜೀವ್ ಗಾಂಧಿ ಹಂತಕರನ್ನು ಸೋನಿಯಾ ಗಾಂಧಿ ಕ್ಷಮಿಸಿದ ರೀತಿಯಲ್ಲೇ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಕ್ಷಮಿಸಿ ಎಂದು ಆಶಾ ದೇವಿಗೆ ಸಲಹೆ ನೀಡಿದ್ದರು.
ಇಂದಿರಾ ಜೈಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಅಪರಾಧಿಗಳ ಜೊತೆ ನಾಲ್ಕು ದಿನ ಈ ಮಹಿಳೆಯನ್ನು (ಇಂದಿರಾ ಜೈಸಿಂಗ್) ಜೈಲಿನಲ್ಲಿರಿಸಬೇಕು.ಇವರಂತಹ ಮಹಿಳೆಯರೇ ಈ ರೀತಿಯ ರಾಕ್ಷಸರು, ಕೊಲೆಗಾರರಿಗೆ ಜನ್ಮ ನೀಡುತ್ತಾರೆ ಎಂದು ಕಿಡಿಕಾರಿದರು.