ಮುಂಬೈ: 'ಮೈ ಮೆಲ್ಬೋರ್ನ್' ಹೆಸರಿನ ಚಿತ್ರಕ್ಕಾಗಿ ಭಾರತದ ಖ್ಯಾತ ಚಿತ್ರ ನಿರ್ದೇಶಕರಾದ ಕಬೀರ್ ಖಾನ್, ಇಮ್ತಿಯಾಜ್ ಅಲಿ, ರಿಮಾ ದಾಸ್ ಮತ್ತು ಒನಿರ್ ಒಟ್ಟಾಗಿ ಕೆಲಸ ಮಾಡಲಿದ್ದಾರೆ.
ಈ ಚತುರ್ಮುಖಗಳು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಚಿತ್ರ ನಿರ್ದೇಶಕರು ಹಾಗೂ ಸಿನೆಮಾ ದಿಗ್ಗಜರೊಂದಿಗೆ ಜೊತೆಯಾಗಿ ಕೆಲಸ ಮಾಡಲಿದ್ದಾರೆ. ಬಳಿಕ ಜನಾಂಗ, ಅಂಗವೈಕಲ್ಯ, ಲೈಂಗಿಕತೆ ಮತ್ತು ಲಿಂಗದ ವಿಷಯಗಳ ಕುರಿತ ಕಿರುಚಿತ್ರಗಳನ್ನು ಚಿತ್ರೀಕರಿಸಲಿದ್ದಾರೆ.
ಈ ನಾಲ್ಕು ಥೀಮ್ ಮೇಲೆ ಚಿತ್ರೀಕರಿಸಿದ ಕಿರುಚಿತ್ರಗಳನ್ನು ಒಟ್ಟುಗೂಡಿಸಿ, 'ಮೈ ಮೆಲ್ಬೋರ್ನ್' ಎಂಬ ಹೆಸರಿನ ಒಂದು ಚಿತ್ರವನ್ನು ಹೊರತರಲಿದ್ದಾರೆ. ವಿಶೇಷವಾಗಿ ಇದು ಮುಂದಿನ ವರ್ಷ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಭಾರತೀಯ ಚಲನಚಿತ್ರೋತ್ಸವ(IFFM)ದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ.
"ಈ ಅಮೋಘ ಕಾರ್ಯಕ್ರಮವು ವಿಕ್ಟೋರಿಯಾ ರಾಜ್ಯದ ಕೆಲ ಸಿನಿಮಾ ಕ್ಷೇತ್ರದ ಸಾಧಕರಿಗೆ, ವಿಶ್ವದ ಅತ್ಯುತ್ತಮ ಚಲನಚಿತ್ರ ನಿರ್ದೇಶಕರೊಂದಿಗೆ ಕೆಲಸ ಮಾಡಲು ಮತ್ತು ಅವರೊಂದಿಗೆ ಬಾಂಧವ್ಯ ವೃದ್ಧಿಸಲು ಸುವರ್ಣಾವಕಾಶವನ್ನು ನೀಡುತ್ತದೆ. ಐಎಫ್‌ಎಫ್‌ಎಂ ಭಾರತದ ವೈವಿಧ್ಯಮಯ ಸ್ವತಂತ್ರ ಸಿನೆಮಾಗಳ ನಾಲ್ಕು ಪ್ರಮುಖ ಧ್ವನಿಗಳನ್ನು ಬರಮಾಡಿಕೊಳ್ಳುತ್ತಿದೆ ಎಂದು ನಾನು ಖುಷಿಪಟ್ಟಿದ್ದೇನೆ. ಅಷ್ಟೇ ಅಲ್ಲ, ರೋಮಾಂಚನಗೊಂಡಿದ್ದೇನೆ" ಎಂದು ಐಎಫ್‌ಎಫ್‌ಎಂನ ನಿರ್ದೇಶಕ ಮಿತು ಭೌಮಿಕ್ ಲ್ಯಾಂಗ್ ಹೇಳಿದ್ದಾರೆ.
ಈ ಸಿನಿಮೋತ್ಸವವು ಅಧಿಕೃತ ವಲಸೆಗಾರರ ಜೀವನದ ನೈಜ ಕಥೆಗಳಿಗೆ ವೇದಿಕೆ ಒದಗಿಸುತ್ತಿದೆ. ಆಯ್ದ ನಾಲ್ಕು ತಂಡಗಳಲ್ಲಿ ಮೂಲ ಸ್ಕ್ರಿಪ್ಟ್ ರಚನೆ, ಸೃಜನಶೀಲತೆ, ಸ್ವಂತಿಕೆ ಮತ್ತು ಶುದ್ಧ ಕಥೆ ಹೇಳುವಿಕೆಗೆ ಬಜೆಟ್ ನಿಗದಿಪಡಿಸಲಾಗುತ್ತದೆ.
ಕಬೀರ್, ಇಮ್ತಿಯಾಜ್, ರಿಮಾ ಮತ್ತು ಒನಿರ್ ಅವರು ಆಯ್ದ ಕಥೆಗಳನ್ನು ಅಭಿವೃದ್ಧಿಪಡಿಸುತ್ತಾರೆ. ಬಳಿಕ ತಮ್ಮ ತಂಡಗಳೊಂದಿಗೆ ಪ್ರಿ-ಪ್ರೊಡಕ್ಷನ್(pre-production) ಕೆಲಸ ನಡೆಯಲಿದೆ. ಕೊರೊನಾದಿಂದಾಗಿ ಹೇರಿರುವ ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಈ ನಾಲ್ವರು ಚಿತ್ರ ನಿರ್ದೇಶಕರು ಚಿತ್ರೀಕರಣಕ್ಕಾಗಿ ಮೆಲ್ಬೋರ್ನ್‌ಗೆ ಪ್ರಯಾಣಿಸಲಿದ್ದಾರೆ.