ಮುಂಬೈ(ಮಹಾರಾಷ್ಟ್ರ) : ಬರೋಬ್ಬರಿ 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಜಾರಿ ಮಾಡಿದ್ದ ಸಮನ್ಸ್ ಅನ್ನು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೈಬಿಟ್ಟಿದ್ದಾರೆ. ಇದರಿಂದಾಗಿ ಸತತ ನಾಲ್ಕನೇ ಬಾರಿಗೆ ವಿಚಾರಣೆಯಿಂದ ನಟಿ ತಪ್ಪಿಸಿಕೊಂಡಂತಾಗಿದೆ.
ಸುಖೇಶ್ ಚಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಮರಿಯಾ ಪಾಲ್ ವಿರುದ್ಧ ದಾಖಲಾಗಿರುವ ಮನಿ ಲಾಂಡರಿಂಗ್ ಕೇಸ್ನಲ್ಲಿ ಜಾಕ್ವೆಲಿನ್ ಹೆಸರು ಕೇಳಿ ಬಂದಿರುವ ಕಾರಣ ಈಗಾಗಲೇ ಮೂರು ಬಾರಿ ಇಡಿ ಸಮನ್ಸ್ ಜಾರಿಗೊಳಿಸಿತ್ತು.
ಇಂದೂ ಕೂಡ ಬೆಳಗ್ಗೆ 10 ರಿಂದ 11 ಗಂಟೆಯೊಳಗೆ ಇಡಿ ಕಚೇರಿಗೆ ಬರಲು ನಾಲ್ಕನೇ ಬಾರಿಗೆ ಸಮನ್ಸ್ ನೀಡಿ ಸೂಚಿಸಲಾಗಿತ್ತು. ಆದರೆ, ಒಂದಿಲ್ಲೊಂದು ನೆಪವೊಡ್ಡಿ ಜಾಕ್ವೆಲಿನ್ ವಿಚಾರಣೆಗೆ ಗೈರಾಗುತ್ತಲೇ ಬಂದಿದ್ದಾರೆ. ಇದೇ ಪ್ರಕರಣ ಈ ಹಿಂದೆ ಬಾಲಿವುಡ್ ನಟಿ ನೋರಾ ಫತೇಹಿಗೂ ಇಡಿ ಸಮನ್ಸ್ ಜಾರಿಗೊಳಿಸಿತ್ತು. ಅಕ್ಟೋಬರ್ 14ರಂದು ನೋರಾ ವಿಚಾರಣೆಗೆ ಹಾಜರಾಗಿದ್ದರು.
ಇದನ್ನೂ ಓದಿ: ₹200 ಕೋಟಿ ವಂಚನೆ ಕೇಸ್: ಇಡಿ ಕಚೇರಿಗೆ ನಟಿ ನೋರಾ ಆಗಮನ, ನಾಳೆ ಜಾಕ್ವೆಲಿನ್ ಹಾಜರು?
ಏನಿದು ಕೇಸ್?: ಫೋರ್ಟಿಸ್ ಹೆಲ್ತ್‌ಕೇರ್ ಪ್ರಮೋಟರ್ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಅನೇಕ ವ್ಯಕ್ತಿಗಳಿಗೆ ಕೋಟ್ಯಂತರ (ಸುಮಾರು 200 ಕೋಟಿ ರೂ.) ರೂಪಾಯಿ ವಂಚಿಸಿರುವ ಆರೋಪದಡಿ ಸುಖೇಶ್ ಚಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಮರಿಯಾ ಪಾಲ್ ವಿರುದ್ಧ ವಂಚನೆ ಮತ್ತು ಸುಲಿಗೆ ಕೇಸ್ ದಾಖಲಾಗಿತ್ತು.
ಆಗಸ್ಟ್ನಲ್ಲಿ ಚಂದ್ರಶೇಖರ್ ಅವರ ಒಡೆತನದ ಕೆಲವು ನಿವೇಶನಗಳ ಮೇಲೆ ಇಡಿ ದಾಳಿ ಮಾಡಿ ಚೆನ್ನೈನ ಬಂಗಲೆ ಹಾಗೂ 82.5 ಲಕ್ಷ ರೂ. ನಗದು ಮತ್ತು 12ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿತ್ತು. ಸದ್ಯ ಈ ಆರೋಪಿತ ದಂಪತಿ ಜೈಲಿನಲ್ಲಿದ್ದು, ತನಿಖೆ ಮುಂದುವರೆದಿದೆ.