ಮುಂಬೈ: ಹೃತಿಕ್ ರೋಷನ್ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ನಟಿ ಕಂಗನಾ ರಣಾವತ್ ಆರೋಪಿಸಿದಾಗಿನಿಂದ ಇಬ್ಬರ ನಡುವಿನ ಜಗಳ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ವಿವಾದ ಮಧ್ಯದಲ್ಲಿ ತಣ್ಣಗಾಗಿದ್ದರೂ ಮತ್ತೆ ಮತ್ತೆ ಹೊಸ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ. ಈ ಸಂಬಂಧ ಇಂದು ನಟ ಹೃತಿಕ್ ರೋಷನ್ ಮುಂಬೈ ಸೈಬರ್ ಕ್ರೈಂ ಅಧಿಕಾರಿಗಳ ಎದುರು ಹಾಜರಾಗಿದ್ದಾರೆ.
ಇದನ್ನೂ ಓದಿ: ಬಾಂದ್ರಾ ವಿಮಾನ ನಿಲ್ದಾಣ ಸೇರಿ ಹಲವೆಡೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಬಾಲಿವುಡ್ ಬೆಡಗಿಯರು: ವಿಡಿಯೋ
"ಈ ವಿಚಾರದ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ನನ್ನ ಪಾಡಿಗೆ ನಾನು ಸುಮ್ಮನಿದ್ದರೂ ಕಂಗನಾ ಈ ಮೇಲ್ ಖಾತೆಯಿಂದ ನನಗೆ ನೂರಕ್ಕೂ ಹೆಚ್ಚು ಇ-ಮೇಲ್ಗಳು ಬಂದಿವೆ" ಎಂದು ಆರೋಪಿಸಿ ಮುಂಬೈ ಸೈಬರ್ ಕ್ರೈಂ ಪೊಲೀಸರಿಗೆ ಹೃತಿಕ್ ದೂರು ನೀಡಿದ್ದರು. ನಂತರ ಈ ಪ್ರಕರಣವನ್ನು ಮುಂಬೈ ಕ್ರೈಂ ಇಂಟಲಿಜನ್ಸ್ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. ಈ ವಿಚಾರಕ್ಕೆ ಸಬಂಧಿಸಿದಂತೆ ಕಂಗನಾ ಕೂಡಾ ಪ್ರತಿದೂರು ಸಲ್ಲಿಸಿ ಹೃತಿಕ್ ರೋಷನ್ ಕೂಡಾ ನನಗೆ ನೂರಕ್ಕೂ ಹೆಚ್ಚು ಇ-ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದರು. ನಂತರ ಪೊಲೀಸರು ಇಬ್ಬರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದರು. ಇಂದು ಮತ್ತೆ ಸೈಬರ್ ಕ್ರೈಂ ಪೊಲೀಸರ ಮುಂದೆ ಹಾಜರಾಗುವಂತೆ ಅಧಿಕಾರಿಗಳು ಹೃತಿಕ್ ರೋಷನ್ಗೆ ಸಮನ್ಸ್ ನೀಡಿದ್ದರು. ತಮ್ಮ ಹೇಳಿಕೆಯನ್ನು ದಾಖಲಿಸಲು ಹೃತಿಕ್ ರೋಷನ್ ಸೈಬರ್ ಕ್ರೈಂ ಕಚೇರಿಗೆ ತೆರಳಿದ್ದಾರೆ. ಕಂಗನಾ ರಣಾವತ್ಗೆ ಕೂಡಾ ಸಮನ್ಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.