ನವದೆಹಲಿ: ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಡ್ರಗ್ಸ್ ಪ್ರಕರಣದಲ್ಲಿ ಮಾಧ್ಯಮಗಳು ತಮ್ಮ ಹೆಸರನ್ನು ತಂದಿವೆ ಎಂದು ನಟಿ ರಕುಲ್ ಪ್ರೀತ್ ಸಿಂಗ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಈ ವಿಚಾರ ಸಂಬಂಧ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ, ಭಾರತೀಯ ಪತ್ರಿಕಾ ಮಂಡಳಿ ಹಾಗೂ ರಾಷ್ಟ್ರೀಯ ಪ್ರಸರಣ ಸಂಸ್ಥೆ(ಎನ್‌ಬಿಎ)ಗೆ ಸೂಚಿಸಿದೆ.
ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಪೀಠ, ಸೆಪ್ಟೆಂಬರ್ 17 ರಂದು ನೀಡಿದ್ದ ಆದೇಶಾನುಸಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ರಾಷ್ಟ್ರೀಯ ಪ್ರಸಾರ ಸಂಸ್ಥೆಗಳು ಏನು ಕ್ರಮ ಕೈಗೊಂಡಿವೆ ಎಂದು ಪ್ರಶ್ನಿಸಿರುವ ಕೋರ್ಟ್ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ನೀಡಿದೆ.
ರಿಯಾ ಚಕ್ರವರ್ತಿ ಅವರೊಂದಿಗೆ ಸಂಪರ್ಕ ಹೊಂದಿದ ಬಗ್ಗೆ ಮಾಧ್ಯಮಗಳು ತಮ್ಮ ವಿರುದ್ಧ ಯಾವುದೇ ರೀತಿಯ ಸುದ್ದಿ, ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿ ರಕುಲ್ ಪ್ರೀತ್ ಸಿಂಗ್ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಕೋರ್ಟ್ ಇಂದು ಯಾವುದೇ ನಿರ್ದೇಶನ ನೀಡದೇ ಅಕ್ಟೋಬರ್ 3ರೊಳಗೆ ಎನ್‌ಬಿಎ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ನನಗೆ ಧೂಮಪಾನ ಅಭ್ಯಾಸವಿಲ್ಲ ನಾನು ನಾನ್ ಸ್ಮೋಕರ್ ಎಂದು ರಕುಲ್ ಪ್ರೀತ್ ಸಿಂಗ್ ಇಂದು ಕೋರ್ಟ್ ಸ್ಪಷ್ಟಪಡಿಸಿದ್ದಾರೆ.