ಬಾಲಿವುಡ್ ನಟ ಇರ್ಫಾನ್ ಖಾನ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 2 ವರ್ಷಗಳಿಂದ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದ ಇರ್ಫಾನ್ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದಿದ್ದರು. ತಮಗಿದ್ದ ಕಾಯಿಲೆಯಿಂದ ಗುಣಮುಖರಾಗುತ್ತಿದ್ದ ಇರ್ಫಾನ್ ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
53 ವರ್ಷದ ಇರ್ಫಾನ್ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಇರ್ಫಾನ್ ಕುಟುಂಬದ ಮೂಲಗಳು 'ವೈದ್ಯರು ಇರ್ಫಾನ್ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇರ್ಫಾನ್ ಬಹಳ ಧೈರ್ಯವಂತರು ಅವರ ಆತ್ಮಸ್ಥೈರ್ಯದಿಂದಲೇ ಶೀಘ್ರ ಗುಣಮುಖರಾಗಿ ವಾಪಸ್ ಬರುತ್ತಾರೆ. ಅಭಿಮಾನಿಗಳು, ಸ್ನೇಹಿತರು ಹಾಗೂ ಪ್ರೀತಿಪಾತ್ರರ ಹಾರೈಕೆ ಅವರ ಮೇಲಿದೆ. ಇರ್ಫಾನ್ ಆರೋಗ್ಯದ ವಿಚಾರವಾಗಿ ಅಭಿಮಾನಿಗಳು ಧೈರ್ಯದಿಂದ ಇರಿ. ನಾವು ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿರುತ್ತೇವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ಶನಿವಾರವಷ್ಟೇ ಇರ್ಫಾನ್ ಖಾನ್ ತಾಯಿ ಸಯಿದಾ ಬೇಗಂ ನಿಧನರಾಗಿದ್ದರು. ಇರ್ಫಾನ್ ಮುಂಬೈನಲ್ಲಿ ನೆಲೆಸಿದ್ದು ಲಾಕ್ಡೌನ್ ಇರುವುದರಿಂದ ತಾಯಿಯ ಅಂತಿಮ ದರ್ಶನ ಪಡೆಯಲು ರಾಜಸ್ಥಾನಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಆದ್ದರಿಂದ ವಿಡಿಯೋ ಕಾಲ್ ಮೂಲಕವೇ ಅಮ್ಮನ ಅಂತಿಮ ದರ್ಶನ ಮಾಡಿದ್ದರು. (ನಟ ಇರ್ಫಾನ್ ಖಾನ್ ತಾಯಿ ವಿಧಿವಶ... ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಲಾಕ್ಡೌನ್ ಅಡ್ಡಿ )
ಇರ್ಫಾನ್ ಕರಿಯರ್ ವಿಚಾರಕ್ಕೆ ಬರುವುದಾದರೆ ಅವರ ಅಭಿನಯದ 'ಅಂಗ್ರೇಜಿ ಮೀಡಿಯಂ' ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್ಡೌನ್ನಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.