ಬಾಲಿವುಡ್ ಖ್ಯಾತ ನಟರಾದ ಅನಿಲ್ ಕಪೂರ್ ಹಾಗೂ ಜಾಕಿಶ್ರಾಫ್ ಜೊತೆಯಾಗಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ವಿಚಾರವನ್ನು ಅನಿಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ನಟರು ಜೊತೆಯಾಗಿ ನಟಿಸುತ್ತಿರುವುದು ಇದೇ ಮೊದಲ ಬಾರಿ ಅಲ್ಲ. 80 ರ ದಶಕದಲ್ಲಿ ರಿಲೀಸ್ ಆದ 'ರಾಮ್ ಲಖನ್' ಹಾಗೂ 90 ರ ದಶಕದಲ್ಲಿ ಬಿಡುಗಡೆಯಾದ 'ರೂಪ್ ಕಿ ರಾಣಿ ಚೋರೋಕಾ ರಾಜಾ' ಸೇರಿ 7-8 ಚಿತ್ರಗಳಲ್ಲಿ ಇವರಿಬ್ಬರೂ ಜೊತೆಯಾಗಿ ನಟಿಸಿದ್ದಾರೆ.
ಈ ಎಲ್ಲಾ ಚಿತ್ರಗಳಲ್ಲೂ ಅನಿಲ್ ಕಪೂರ್, ಜಾಕಿ ಶ್ರಾಫ್ ತಮ್ಮನಾಗಿ ಕಾಣಿಸಿಕೊಂಡಿದ್ದು ಇಬ್ಬರೂ ಜೊತೆಯಾಗಿ ನಟಿಸಿರುವ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಜಾಕಿಶ್ರಾಫ್ ಜೊತೆಗಿನ ಎರಡು ಫೋಟೋಗಳನ್ನು ಅನಿಲ್ ಕಪೂರ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ಸಿನಿಮಾ ಯಾವಾಗ ಆರಂಭವಾಗಲಿದೆ ಎಂದು ಹೇಳದಿದ್ದರೆ 'ಫರಿಂದಾ' ಚಿತ್ರದಲ್ಲಿ ಹೊಡೆದಂತೆ ಮತ್ತೆ 16-17 ಹೊಡೆತ ಕೊಡುತ್ತೇನೆ" ಎಂದು ಜಾಕಿಶ್ರಾಫ್ ನನಗೆ ಹೇಳುತ್ತಿರುವುದಾಗಿ ಕ್ಯಾಪ್ಷನ್ ನೀಡಿದ್ದಾರೆ. ಎರಡನೇ ಫೋಟೋದಲ್ಲಿ "ಸ್ಕ್ರಿಪ್ಟ್ ಕೆಲಸ ನಡೆಯುತ್ತದೆ, ಆದಷ್ಟು ಬೇಗ ಸಿನಿಮಾ ಆರಂಭವಾಗಲಿದೆ" ಎಂದು ಅನಿಲ್ ಕಪೂರ್ ಉತ್ತರ ನೀಡುತ್ತಿರುವಂತೆ ಕ್ಯಾಪ್ಷನ್ ನೀಡಿದ್ದಾರೆ. ಅನಿಲ್ ಕಪೂರ್ ಹಾಗೂ ಜಾಕಿ ಶ್ರಾಫ್ 2001 ರಲ್ಲಿ ಬಿಡುಗಡೆಯಾದ 'ಲಜ್ಜಾ' ಚಿತ್ರದಲ್ಲಿ ಕೊನೆಯ ಬಾರಿ ಜೊತೆಯಾಗಿ ನಟಿಸಿದ್ದರು.
ಇದನ್ನೂ ಓದಿ: ನಮ್ಮದು, ರೈತರದ್ದು ಎಮೋಷನಲ್ ಅಲ್ಲ, ಅದು ರಕ್ತ ಸಂಬಂಧ: ನಟ ದರ್ಶನ್
ರಾಮ್ ಲಖನ್, ಕಭಿ ನ ಕಭಿ, ತ್ರಿಮೂರ್ತಿ, 1942 ಲವ್ ಸ್ಟೋರಿ, ರೂಪ್ ಕಿ ರಾಣಿ ಚೋರೋಂಕಾ ರಾಜಾ, ಫರಿಂದಾ, ಕಾಲಾ ಬಜಾರ್, ಕರ್ಮ, ಯುಧ್ ಅಂಧಾ ಬಜಾರ್, ಲಜ್ಜಾ ಸಿನಿಮಾದಲ್ಲಿ ಜಾಕಿಶ್ರಾಫ್ ಹಾಗೂ ಅನಿಲ್ ಕಪೂರ್ ಜೊತೆಯಾಗಿ ನಟಿಸಿದ್ದಾರೆ. ಸದ್ಯಕ್ಕೆ ಅನಿಲ್ ಕಪೂರ್ ರಾಜ್ ಮೆಹ್ತಾ ನಿರ್ದೇಶನದಲ್ಲಿ ವರುಣ್ ಧವನ್, ಕೈರಾ ಅಡ್ವಾಣಿ, ನೀತು ಸಿಂಗ್ ಜೊತೆ 'ಜುಗ್ ಜುಗ್ಗ್ ಜಿಯೋ' ಸಿನಿಮಾ ಹಾಗೂ ಮುರುದ್ ಖೇತಾನ್ 'ಅನಿಮಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.