ಮುಂಬೈ : ಕೊರೊನಾ ಆರ್ಭಟದಿಂದಾಗಿ ಬಹುತೇಕ ಎಲ್ಲಾ ಚಿತ್ರರಂಗಗಳೂ ಬಂದ್ ಆಗಿದ್ದು, ಕಲಾವಿದರು ಸೇರಿದಂತೆ ತಾಂತ್ರಿಕ ವರ್ಗ ಕೆಲಸವಿಲ್ಲದೆ ಕುಳಿತಿದೆ. ಕೋವಿಡ್ನಿಂದಾಗಿ ತೀವ್ರ ಸಂಕಷ್ಟಕ್ಕೆ ಚಿತ್ರೋದ್ಯಮ ತಲುಪಿದೆ.
ಈ ನಡುವೆ ಸಿನಿಮಾ ನಿರ್ಮಾಪಕ ಆದಿತ್ಯಾ ಚೋಪ್ರಾ ಸಿನಿಮಾ ರಂಗದಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.
ಇದಕ್ಕಾಗಿ ‘ಯಶ್ ಚೋಪ್ರಾ ಸಾಥಿ’ ಎಂಬ ಅಭಿಯಾನ ಆರಂಭಿಸಿದ್ದು, ನೌಕರರ ನೆರವಿಗೆ ಬಂದಿದ್ದಾರೆ. ಯಶ್ ಚೋಪ್ರಾ ಫೌಂಡೇಶನ್ ಚಲನಚಿತ್ರೋದ್ಯಮದಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ 5,000 ರೂ. ಜೊತೆಗೆ 4 ಜನರಿರುವ ಕುಟುಂಬದ ಕಾರ್ಮಿಕರಿಗೆ ಪಡಿತರ ಕಿಟ್‌ಗಳನ್ನು ತಮ್ಮ ಎನ್‌ಜಿಒ ಪಾಲುದಾರರಾದ ಯೂತ್ ಫೀಡ್ ಇಂಡಿಯಾ ಮೂಲಕ ಇಡೀ ತಿಂಗಳು ವಿತರಿಸಲಿದೆ.
ಅಗತ್ಯವಿರುವವರು ಆನ್‌ಲೈನ್ ಅರ್ಜಿ ಪ್ರಕ್ರಿಯೆಯ ಮೂಲಕ ಬೆಂಬಲವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಪ್ರೊಡಕ್ಷನ್ ಹೌಸ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ.
ತಮ್ಮ 50 ವರ್ಷಗಳ ಪ್ರಯಾಣದ ಅವಿಭಾಜ್ಯ ಅಂಗವಾಗಿರುವ ಹಿಂದಿ ಚಲನಚಿತ್ರೋದ್ಯಮ ಮತ್ತು ಅದರ ಕಾರ್ಮಿಕರಿಗೆ ಬೆಂಬಲ ನೀಡಲು ಪ್ರತಿಷ್ಠಾನವು ಬದ್ಧವಾಗಿದೆ ಎಂದು ಯಶ್ ರಾಜ್ ಫಿಲ್ಮ್ಸ್ ಹಿರಿಯ ಉಪಾಧ್ಯಕ್ಷ ಅಕ್ಷಯ್ ವಿಧಾನಿ ಹೇಳಿದ್ದಾರೆ.
ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಹುಭಾಷಾ ನಟಿ ಎರಿಕಾ ಫರ್ನಾಂಡಿಸ್