ನವದೆಹಲಿ : ಮೆಟಾ ಮಾಲೀಕತ್ವದ ವಾಟ್ಸ್‌ಆ್ಯಪ್ ಟ್ಸಾಪ್ ಏಪ್ರಿಲ್ 2023 ರಲ್ಲಿ ಭಾರತದಲ್ಲಿ 74 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ಐಟಿ ನಿಯಮಗಳು 2021 ರ ನಿಬಂಧನೆಯ ಪ್ರಕಾರ ಪ್ರಕಟಿಸಲಾದ ಕಂಪನಿಯ ಮಾಸಿಕ ವರದಿಯ ಭಾಗವಾಗಿ ಈ ವಿವರಗಳನ್ನು ಒದಗಿಸಲಾಗಿದೆ. ಏಪ್ರಿಲ್ 1 ರಿಂದ ಏಪ್ರಿಲ್ 30, 2023 ರ ಅವಧಿಯ ವರದಿ ಇದಾಗಿದೆ. ಭಾರತದಲ್ಲಿನ ಬಳಕೆದಾರರು ನೀಡಿದ ದೂರುಗಳಿಗೆ ಪ್ರತಿಕ್ರಿಯೆಯಾಗಿ ಕಂಪನಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ವಾಟ್ಸ್ ಆ್ಯಪ್ ವರದಿಯಲ್ಲಿ ವಿವರಿಸಿದೆ. ಖಾತೆಗಳು ಕಾನೂನು ಅಥವಾ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತೆಗೆದುಕೊಂಡ ಕ್ರಮ ಮತ್ತು ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ (GAC) ಸ್ವೀಕರಿಸಿದ ಆದೇಶಗಳ ಪ್ರಕಾರ ಕೈಗೊಂಡ ಕ್ರಮಗಳ ವಿವರ ಇದರಲ್ಲಿದೆ.
"ಐಟಿ ನಿಯಮಗಳು 2021 ರ ಅನುಸಾರವಾಗಿ ನಾವು ಏಪ್ರಿಲ್ 2023 ರ ನಮ್ಮ ವರದಿಯನ್ನು ಪ್ರಕಟಿಸಿದ್ದೇವೆ. ಈ ಬಳಕೆದಾರ ಸುರಕ್ಷತಾ ವರದಿಯು ಬಳಕೆದಾರರಿಂದ ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ವಾಟ್ಸ್ ಆ್ಯಪ್ ತೆಗೆದುಕೊಂಡ ಅನುಗುಣವಾದ ಕ್ರಮಗಳನ್ನು ಮತ್ತು ಪ್ಲಾಟ್ಫಾರ್ಮ್ ಅನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯುವ ವಾಟ್ಸ್ ಆ್ಯಪ್ನ ಸ್ವಂತ ನಿರ್ಬಂಧಕಾರಿ ಕ್ರಮಗಳನ್ನು ಒಳಗೊಂಡಿದೆ. ಇತ್ತೀಚಿನ ಮಾಸಿಕ ವರದಿಯಲ್ಲಿ ಪ್ರಕಟಿಸಿದಂತೆ ವಾಟ್ಸ್ ಆ್ಯಪ್ ಏಪ್ರಿಲ್‌ನಲ್ಲಿ 7.4 ಮಿಲಿಯನ್ ಖಾತೆಗಳನ್ನು ನಿಷೇಧಿಸಿದೆ ಮತ್ತು ಬಳಕೆದಾರರಿಂದ ಯಾವುದೇ ದೂರುಗಳು ಬರುವ ಮೊದಲೇ ಇವುಗಳ ಪೈಕಿ 2.4 ಮಿಲಿಯನ್ ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ" ಎಂದು ವಾಟ್ಸ್ ಆ್ಯಪ್ ವಕ್ತಾರರು ತಿಳಿಸಿದ್ದಾರೆ.
ಏತನ್ಮಧ್ಯೆ, ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಇತ್ತೀಚೆಗೆ 'ಚಾಟ್ ಲಾಕ್' ಎಂಬ ಹೊಸ ವಾಟ್ಸ್ ಆ್ಯಪ್ ವೈಶಿಷ್ಟ್ಯವನ್ನು ಘೋಷಿಸಿದರು. ಬಳಕೆದಾರರ ಅತ್ಯಂತ ಗೌಪ್ಯ ಸಂಭಾಷಣೆಗಳನ್ನು ಇನ್ನಷ್ಟು ಸುರಕ್ಷಿತವಾಗಿಡಲು ಈ ವೈಶಿಷ್ಟ್ಯ ಪರಿಚಯಿಸಲಾಗಿದೆ. ಈ ವೈಶಿಷ್ಟ್ಯದ ಮೂಲಕ ನೀವು ನಿಮ್ಮ ಅತ್ಯಂತ ಗೌಪ್ಯ ಸಂಭಾಷಣೆಗಳನ್ನು ಪಾಸ್‌ವರ್ಡ್ ಹಾಕಿ ರಕ್ಷಿಸಬಹುದುಮತ್ತು ಅವುಗಳನ್ನು ಪ್ರತ್ಯೇಕ ಫೋಲ್ಡರ್‌ನಲ್ಲಿ ಸುರಕ್ಷಿತವಾಗಿಡಬಹುದು. ಯಾರಾದರೂ ನಿಮಗೆ ಸಂದೇಶಗಳನ್ನು ಕಳುಹಿಸಿದಾಗ ಮತ್ತು ನೀವು ಆ ಚಾಟ್ ಅನ್ನು ಲಾಕ್ ಮಾಡಿದಾಗ, ಕಳುಹಿಸುವವರ ಹೆಸರು ಮತ್ತು ಸಂದೇಶದ ವಿಷಯ ಕೂಡ ಕಾಣಿಸುವುದಿಲ್ಲ.
ವಾಟ್ಸ್ ಆ್ಯಪ್ ಇದು ಆ್ಯಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಲಭ್ಯವಿರುವ ಉಚಿತ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿದೆ. ಇದನ್ನು ಬಳಸಿ ಇತರ ಬಳಕೆದಾರರಿಗೆ ಒಬ್ಬರಿಗೊಬ್ಬರು ಅಥವಾ ಗುಂಪುಗಳಲ್ಲಿ ಪಠ್ಯ ಸಂದೇಶಗಳನ್ನು ಕಳುಹಿಸಬಹುದು. ಮುಖ್ಯವಾಗಿ ವಾಟ್ಸ್ ಆ್ಯಪ್ ಚಾಟ್‌ಗಳು ಇಂಟರ್ನೆಟ್ ಮೂಲಕ ರವಾನೆಯಾಗುತ್ತವೆ. ಇದು ನಿಮ್ಮ ಫೋನ್ನಲ್ಲಿರುವ ಎಸ್ಎಂಎಸ್ ಸೇವೆಗಿಂತ ವಿಭಿನ್ನವಾಗಿದೆ. ಚಾಟ್‌ಗಳ ಒಳಗೆ ಫೋಟೋಗಳನ್ನು ಕಳುಹಿಸುವುದು, ನಿಮ್ಮ ಲೊಕೇಶನ್ ಹಂಚಿಕೊಳ್ಳುವುದು, ಹುಡುಕುವುದು ಮತ್ತು GIF ಗಳನ್ನು ಕಳುಹಿಸುವುದು ಸೇರಿದಂತೆ ಇನ್ನೂ ಹಲವಾರು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಮೂಲ ಪಠ್ಯ ಸಂದೇಶ ಮಾತ್ರವಲ್ಲದೆ ನೀವು ವಾಟ್ಸ್ ಆ್ಯಪ್ನಲ್ಲಿ ಧ್ವನಿ ಕರೆಗಳು, ವೀಡಿಯೊ ಕರೆಗಳನ್ನು ಮಾಡಬಹುದು ಮತ್ತು ರೆಕಾರ್ಡ್ ಮಾಡಿದ ಧ್ವನಿ ಸಂದೇಶಗಳನ್ನು ಕಳುಹಿಸಬಹುದು.
ಇದನ್ನೂ ಓದಿ : ಚಾಟ್ಜಿಪಿಟಿ ವೆಬ್ಸೈಟ್ಗೆ ಭೇಟಿ ನೀಡಿದ 100 ಕೋಟಿ ಬಳಕೆದಾರರು!