ಹೈದರಾಬಾದ್: ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆ್ಯಪ್ ದೇಶದಲ್ಲಿ ನವೆಂಬರ್ ತಿಂಗಳೊಂದರಲ್ಲೇ 71 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಈ ಪೈಕಿ 19.52 ಲಕ್ಷ ಬಳಕೆಯಾಗದ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳ ನಿಯಮ ಉಲ್ಲಂಘನೆ, ವೈಯಕ್ತಿಕ ತೋಜೋವಧೆಯಂತಹ ಆರೋಪಗಳ ಆಧಾರದ ಮೇಲೆ ಹೊಸ ಐಟಿ ನಿಯಮಗಳು- 2021 ಪ್ರಕಾರ ಕ್ರಮ ಜರುಗಿಸಲಾಗಿದೆ. ಒಂದೇ ತಿಂಗಳಲ್ಲಿ ಇಷ್ಟು ಪ್ರಮಾಣದ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಕಂಪನಿ ಹೇಳಿದೆ.
ತನ್ನ ಮಾಸಿಕ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಾಮಾಜಿಕ ಮಾಧ್ಯಮ ಕಂಪನಿ, ನವೆಂಬರ್ 1 ರಿಂದ 30 ರ ನಡುವೆ 71,96,000 ಖಾತೆಗಳನ್ನು ದೂರಿನ ಆಧಾರದ ಮೇಲೆ ನಿಷೇಧಿಸಿದ್ದರೆ, ಈ ಪೈಕಿ ಸುಮಾರು 19,54,000 ಖಾತೆಗಳು ಬಳಕೆಯಾಗದೇ ಉಳಿದ ಖಾತೆಗಳಿಗೆ ನಿರ್ಬಂಧ ಹೇರಲಾಗಿದೆ. ಭಾರತದಲ್ಲಿ 500 ಮಿಲಿಯನ್ ವಾಟ್ಸ್ಆ್ಯಪ್ ಬಳಕೆದಾರರು ಇದ್ದಾರೆ. ಇದರಲ್ಲಿ 8841 ಖಾತೆಗಳ ಮೇಲೆ ದೂರುಗಳು ಬಂದಿವೆ ಎಂದು ಅದು ಮಾಹಿತಿ ನೀಡಿದೆ.
ಕಂಪನಿ ಬಿಡುಗಡೆ ಮಾಡಿದ ಅಕೌಂಟ್ಸ್ ಆಕ್ಷನ್ಡ್ ವರದಿಯಲ್ಲಿ ತಿಳಿಸಿದಂತೆ, ಸರ್ಕಾರ ಮತ್ತು ಬಳಕೆದಾರರು ನೀಡಿದ ದೂರಿನ ಮೇರೆಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಖಾತೆಯನ್ನು ನಿಷೇಧಿಸುವ, ನಿಷೇಧಿತ ಖಾತೆಯನ್ನು ಮರುಸ್ಥಾಪಿಸುವ ಬಗ್ಗೆ ಕ್ರಮ ವಹಿಸಲಾಗಿದೆ.
ಕೇಂದ್ರದಿಂದ ಸಮಿತಿ ರಚನೆ: ಸಾಮಾಜಿಕ ಮಾಧ್ಯಮಗಳಲ್ಲಿ ದೇಶದ ಬಗ್ಗೆ ಋಣಾತ್ಮಕ ಮಾಹಿತಿ, ವೈಯಕ್ತಿಕ ತೇಜೋವಧೆ ಮತ್ತು ಸುಳ್ಳು ಮಾಹಿತಿಯನ್ನು ಭಿತ್ತರಿಸುವುದರ ವಿರುದ್ಧ ಕಠಿಣ ಕ್ರಮಕ್ಕೆ ಎಲ್ಲ ಸಾಮಾಜಿಕ ಮಾಧ್ಯಮಗಳಿಗೆ ಸೂಚನೆ ನೀಡಲಾಗಿದೆ. ಅದರ ಜೊತೆಗೆ ಸೋಷಿಯಲ್ ಮೀಡಿಯಾ ಬಳಸುವ ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿ (ಜಿಎಸಿ) ಅನ್ನು ಪ್ರಾರಂಭಿಸಿದೆ. ಇದು ಬರುವ ದೂರುಗಳಿಗೆ ಸಂಬಂಧಿಸಿದಂತೆ ಆಯಾ ಮಾಧ್ಯಮಗಳಿಗೆ ಎಚ್ಚರಿಕೆ ರವಾನಿಸುವ ಕೆಲಸ ಮಾಡುತ್ತದೆ.
ರಚಿಸಲಾದ ಸಮಿತಿಯು ದೇಶದ ಡಿಜಿಟಲ್ ಕಾನೂನುಗಳನ್ನು ಬಲಪಡಿಸುವ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸುತ್ತದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ನಿರ್ಧಾರಗಳ ವಿರುದ್ಧ ಬಳಕೆದಾರರ ಅನಿಸಿಕೆಗಳನ್ನು ಇದು ಆಲಿಸುತ್ತದೆ.
ಇದಕ್ಕೂ ಮೊದಲು ಅಕ್ಟೋಬರ್ ತಿಂಗಳಲ್ಲಿ ವಾಟ್ಸ್ಆ್ಯಪ್ ಭಾರತದಲ್ಲಿ 75 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ರದ್ದುಗೊಳಿಸಿತ್ತು. ಅಕ್ಟೋಬರ್ 1ರಿಂದ 31ರ ಅವಧಿಯಲ್ಲಿ ಒಟ್ಟಾರೆ 75,48,000 ಖಾತೆಗಳನ್ನು ನಿಷೇಧಿಸಿತ್ತು.
ಇದನ್ನೂ ಓದಿ: ಅಕ್ಟೋಬರ್ನಲ್ಲಿ 75 ಲಕ್ಷ ಖಾತೆ ಬ್ಯಾನ್ ಮಾಡಿದ ವಾಟ್ಸ್ಆ್ಯಪ್