ನವದೆಹಲಿ: ಜಾಗತಿಕವಾಗಿ ಸ್ಮಾರ್ಟ್ ವಾಚ್ ಮಾರಾಟವು 2024 ರಲ್ಲಿ ಶೇಕಡಾ 17 ರಷ್ಟು ಬೆಳವಣಿಗೆ ಕಾಣುವ ಸಾಧ್ಯತೆಯಿದೆ ಮತ್ತು ಈ ವರ್ಷ 83 ಮಿಲಿಯನ್ ಸಂಖ್ಯೆಯಷ್ಟು ಸ್ಮಾರ್ಟ್ ವಾಚ್ಗಳು ಮಾರಾಟವಾಗುವ ನಿರೀಕ್ಷೆಯಿದೆ ಎಂದು ಹೊಸ ವರದಿಯೊಂದು ಹೇಳಿದೆ. ಆರಂಭದಲ್ಲಿ ಬೇಸಿಕ್ ಅಥವಾ ಕೈಗೆಟುಕುವ ಸ್ಮಾರ್ಟ್ ವಾಚ್ ಗಳಿಗೆ ಆಕರ್ಷಿತರಾದ ಬಳಕೆದಾರರು ಈಗ ಹೆಚ್ಚಿನ ಕಾರ್ಯಕ್ಷಮತೆಯ ವಾಚ್ಗಳನ್ನು ಬಯಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ವಾಚ್ ಖರೀದಿಸಿದವರು ಈಗ ಹೊಸ ಮಾದರಿಯ ವಾಚ್ಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ.
"ಗಮನಾರ್ಹ ಬ್ಯಾಟರಿ ಬಾಳಿಕೆ ಮತ್ತು ಪ್ರೀಮಿಯಂ ಸಾಧನಗಳಲ್ಲಿ ಮೈಕ್ರೋ-ಎಲ್ಇಡಿ ಪರದೆಗಳ ಅಳವಡಿಕೆ ಸೇರಿದಂತೆ ಅತ್ಯಾಧುನಿಕ ಹಾರ್ಡ್ವೇರ್ ಸುಧಾರಣೆಗಳೊಂದಿಗೆ ಸುಧಾರಿತ ಸ್ಮಾರ್ಟ್ವಾಚ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಗುರಿಯನ್ನು ಮಾರಾಟಗಾರರು ಹೊಂದಿದ್ದಾರೆ" ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೆನಾಲಿಸ್ನ ಸಂಶೋಧನಾ ವಿಶ್ಲೇಷಕ ಜ್ಯಾಕ್ ಲೀಥೆಮ್ ಹೇಳಿದ್ದಾರೆ.
ರಕ್ತದೊತ್ತಡ ಮೇಲ್ವಿಚಾರಣೆ ಮತ್ತು ಸ್ಲೀಪ್ ಅಪ್ನಿಯಾ ಪತ್ತೆಹಚ್ಚುವಿಕೆಯಂತಹ ಹೊಸ ಫಿಟ್ನೆಸ್ ಮತ್ತು ಆರೋಗ್ಯ ಪರೀಕ್ಷೆಗಳಂಥ ಹೊಸ ವೈಶಿಷ್ಟ್ಯಗಳು ಸ್ಮಾರ್ಟ್ವಾಚ್ಗಳಲ್ಲಿ ಬರುತ್ತಿವೆ. ಆಪಲ್ ಇಂಥ ವೈಶಿಷ್ಟ್ಯಗಳನ್ನು ತನ್ನ ವಾಚ್ಗಳಲ್ಲಿ ಪರಿಚಯಿಸಿದ ನಂತರ ಇವು ಹೊಸ ಉದ್ಯಮ ಮಾನದಂಡಗಳಾಗುವ ನಿರೀಕ್ಷೆಯಿದೆ.
ಧರಿಸಬಹುದಾದ ಬ್ಯಾಂಡ್ ಮಾರುಕಟ್ಟೆಯು 2024 ರಲ್ಲಿ ಶೇಕಡಾ 10 ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಜಾಗತಿಕ ಧರಿಸಬಹುದಾದ ಬ್ಯಾಂಡ್ ಮಾರುಕಟ್ಟೆ ವಿಶ್ಲೇಷಣೆಯ ಪ್ರಕಾರ 2023 ರಲ್ಲಿ ಸ್ಮಾರ್ಟ್ವಾಚ್ಗಳ ಮಾರಾಟದಲ್ಲಿ ಶೇಕಡಾ 2 ರಷ್ಟು ಏರಿಕೆಯಾಗಲಿದ್ದು, 186 ಮಿಲಿಯನ್ ಯುನಿಟ್ ತಲುಪಬಹುದು ಎಂದು ಊಹಿಸಲಾಗಿದೆ.
ಸ್ಮಾರ್ಟ್ ವಾಚ್ ಎಂಬುದು ಧರಿಸಬಹುದಾದ ಕಂಪ್ಯೂಟಿಂಗ್ ಸಾಧನವಾಗಿದ್ದು, ಇದು ಕೈಗಡಿಯಾರ ಅಥವಾ ಇತರ ಸಮಯ ತೋರಿಸುವ ಸಾಧನವನ್ನು ಹೋಲುತ್ತದೆ. ಸಮಯವನ್ನು ಹೇಳುವುದರ ಜೊತೆಗೆ ಅನೇಕ ಸ್ಮಾರ್ಟ್ ವಾಚ್ ಗಳು ಬ್ಲೂಟೂತ್ ಸಾಮರ್ಥ್ಯ ಹೊಂದಿವೆ. ಸ್ಮಾರ್ಟ್ ವಾಚ್ ಅನ್ನು ವೈರ್ ಲೆಸ್ ಬ್ಲೂಟೂತ್ ಅಡಾಪ್ಟರ್ ನಂತೆ ಬಳಸಬಹುದು ಮತ್ತು ಸ್ಮಾರ್ಟ್ ಫೋನ್ ಅನ್ನು ವಾಚ್ನೊಂದಿಗೆ ಸಂಪರ್ಕಿಸಬಹುದು. ಸ್ಮಾರ್ಟ್ ವಾಚ್ ಮೂಲಕ ತಮ್ಮ ಸ್ಮಾರ್ಟ್ಫೋನ್ನಿಂದ ಕರೆ ಆರಂಭಿಸಬಹುದು, ಕರೆಗೆ ಉತ್ತರಿಸಬಹುದು, ಇಮೇಲ್ ಮತ್ತು ಪಠ್ಯ ಸಂದೇಶಗಳನ್ನು ಓದಬಹುದು ಮತ್ತು ವಾಚ್ನ ಇಂಟರ್ ಫೇಸ್ ಮೂಲಕ ಇನ್ನೂ ಹಲವಾರು ಸಂವಹನ ಕಾರ್ಯಗಳನ್ನು ಮಾಡಬಹುದು.
ಇದನ್ನೂ ಓದಿ : 'Boycott Maldives' ಟ್ರೆಂಡಿಂಗ್: ಭಾರತ ನಿಂದಿಸಿದ ಮಾಲ್ಡೀವ್ಸ್ಗೆ ತಿರುಗೇಟು