ಹೈದರಾಬಾದ್ : ವೈರಸ್ ನಿರೋಧಕ ಅಂಶವಿರುವ ಅಣಬೆಯನ್ನು ಕಂಡು ಹಿಡಿಯುವಲ್ಲಿ ಹೈದರಾಬಾದ್ನ ಸೆಂಟರ್ ಫಾರ್ ಸೆಲ್ಯೂಲರ್ ಅಂಡ್ ಮಾಲಿಕ್ಯುಲಾರ್ ಬಯಾಲಜಿ (ಸಿಸಿಎಂಬಿ) ಯಶಸ್ವಿಯಾಗಿದೆ.
''ಅಟಲ್ ಇನ್ಕ್ಯುಬೇಶನ್''ನ ಅಂಗಸಂಸ್ಥೆಯಾದ ''ಕ್ಲೋನ್ ಡೀಲ್ಸ್'' ಹಾಗೂ ಸೆಂಟರ್ ಫಾರ್ ಸೆಲ್ಯೂಲರ್ ಅಂಡ್ ಮಾಲಿಕ್ಯುಲಾರ್ ಬಯಾಲಜಿ ಜಂಟಿಯಾಗಿ ಈ ಸಂಶೋಧನೆ ನಡೆಸಿದ್ದು, ಯಶಸ್ವಿಯಾಗಿವೆ.
ಹೊಸದಾಗಿ ಸಂಶೋಧಿಸಿರುವ ಅಣಬೆಗಳಲ್ಲಿ ಆ್ಯಂಟಿ ಆಕ್ಸಿಂಡೆಂಟ್ಸ್ಗಳ ಪ್ರಮಾಣ ಹೆಚ್ಚಿರುತ್ತದೆ. ಇವುಗಳಲ್ಲಿನ ಬೀಟಾ- ಗ್ಲುಕಾನ್ಗಳು ಆ್ಯಂಟಿ ವೈರಲ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುತ್ತವೆ.
ಕೊರೊನಾ ರೋಗ ನಿರೋಧಕವನ್ನು ತಯಾರಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಪ್ರಯೋಗ ನಡೆಸಿದ್ದು, ಅದರ ಹಿನ್ನೆಲೆಯಲ್ಲಿಯೇ ಅಣಬೆ ಆಹಾರವನ್ನು ರೋಗ ನಿರೋಧಕವಾಗಿ ಸಂಶೋಧನೆ ಮಾಡಿ ಯಶಸ್ವಿಯಾಗಿದ್ದಾರೆ.
ಈ ಆಹಾರವನ್ನು ಜನರಿಗೆ ತಲುಪಿಸುವ ಸಲುವಾಗಿ ಅಂಬ್ರೋಷಿಯಾ ಎಂಬ ಆಹಾರ ಕಂಪನಿ ಒಪ್ಪಂದ ಮಾಡಿಕೊಂಡಿದ್ದು, ರೋಗ ನಿರೋಧಕ ಆಹಾರವನ್ನು ದ್ರವರೂಪದಲ್ಲಿ ಒದಗಿಸಲು ಮುಂದಾಗಿದೆ. ಇದರ ಜೊತೆಗೆ ಅಣಬೆ, ಅರಿಶಿನ ಮುಂತಾದವನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ.
ಸಿಸಿಎಂಬಿ ನಿರ್ದೇಶಕರಾದ ರಾಕೇಶ್ ಮಿಶ್ರಾ ''ಈಗ ಶೋಧಿಸಿರುವಂತಹ ಅಣಬೆಯಂತಹ ಆಹಾರ ಪದಾರ್ಥಗಳು ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತವೆ. ಮುಂದಿನ ವರ್ಷದಲ್ಲಿ ಈ ಆಹಾರ ಪದಾರ್ಥಗಳು ಜನರಿಗೆ ಸಿಗುತ್ತವೆ'' ಎಂದು ಸ್ಪಷ್ಟನೆ ನೀಡಿದ್ದಾರೆ.