ಸ್ಯಾನ್ ಫ್ರಾನ್ಸಿಸ್ಕೋ: ಚಾಟ್ ಜಿಪಿಟಿ ಡೆವಲಪರ್ ಓಪನ್ ಎಐನ ಪದಚ್ಯುತ ಸಿಇಒ ಸ್ಯಾಮ್ ಆಲ್ಟ್ ಮ್ಯಾನ್ ಈಗ ತಮ್ಮದೇ ಆದ ಹೊಸ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕಂಪನಿಯೊಂದನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ ಎಂದು ಅವರು ಹೂಡಿಕೆದಾರರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಅವರು ಎಕ್ಸ್ನಲ್ಲಿ "ನಾನು ಓಪನ್ಎಐ ತಂಡವನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.
ಓಪನ್ಎಐನ ಮಾಜಿ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಗ್ರೆಗ್ ಬ್ರಾಕ್ಮನ್ (ಆಲ್ಟ್ಮ್ಯಾನ್ ಅವರ ವಜಾದ ನಂತರ ಕಂಪನಿಗೆ ರಾಜೀನಾಮೆ ನೀಡಿದವರು) ಸಹ ಈ ಪ್ರಯತ್ನದಲ್ಲಿ ಕೈಜೋಡಿಸುವ ಸಾಧ್ಯತೆಯಿದೆ ಮತ್ತು ಯೋಜನೆ ಇನ್ನೂ ಅಭಿವೃದ್ಧಿ ಹಂತದಲ್ಲಿದೆ ದಿ ಇನ್ಫಾರ್ಮೇಶನ್ (The Information) ವರದಿ ಮಾಡಿದೆ.
"ಹೊಸ ಕಂಪನಿಯ ಸ್ವರೂಪ ನಿಖರವಾಗಿ ಹೇಗಿರಬಹುದು ಎಂಬುದು ತಕ್ಷಣಕ್ಕೆ ತಿಳಿದಿಲ್ಲ. ಆದರೆ ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಆಲ್ಟ್ ಮ್ಯಾನ್ ಅವರ ವಿಶಾಲ ಮಹತ್ವಾಕಾಂಕ್ಷೆಗಳ ಬಗ್ಗೆ ಹೆಚ್ಚಿನ ವಿವರಗಳು ಹೊರಬಂದಿವೆ" ಎಂದು ವರದಿ ಶನಿವಾರ ತಡರಾತ್ರಿ ತಿಳಿಸಿದೆ. ಹೊಸ ಕಂಪನಿ ಸ್ಥಾಪಿಸುವ ನಿಟ್ಟಿನಲ್ಲಿ ಆಲ್ಟ್ಮ್ಯಾನ್ ಅವರು ಚಿಪ್ ಡಿಸೈನರ್ ಕಂಪನಿ ಸೇರಿದಂತೆ ಸೆಮಿಕಂಡಕ್ಟರ್ ಕಂಪನಿಗಳ ಕಾರ್ಯನಿರ್ವಾಹಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
"ಆಲ್ಟ್ಮ್ಯಾನ್ ಅವರ ಈ ಪ್ರಯತ್ನವು ವರ್ಷಗಳನ್ನು ತೆಗೆದುಕೊಳ್ಳಬಹುದು. ಚರ್ಚೆಗಳಲ್ಲಿ ಆಲ್ಟ್ಮ್ಯಾನ್ ಓಪನ್ಎಐ ಅನ್ನು ಪ್ರತಿನಿಧಿಸುತ್ತಿದ್ದಾರೆಯೇ ಅಥವಾ ಪ್ರತ್ಯೇಕ ಉದ್ಯಮವನ್ನು ಪ್ರತಿನಿಧಿಸುತ್ತಿದ್ದಾರೆಯೇ ಎಂದು ತಿಳಿಯಲು ಸಾಧ್ಯವಾಗಲಿಲ್ಲ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಪಲ್ನ ಮಾಜಿ ಚೀಫ್ ಡಿಸೈನರ್ ಜಾನಿ ಐವ್ ಮತ್ತು ಆಲ್ಟ್ ಮ್ಯಾನ್ ಒಟ್ಟಾಗಿ ಸೇರಿಕೊಂಡು ಎಐ ಹಾರ್ಡ್ವೇರ್ ಸಾಧನವೊಂದನ್ನು ಪ್ರಾರಂಭಿಸಲು ಯೋಚಿಸುತ್ತಿದ್ದಾರೆ ಎಂದು ಸೆಪ್ಟೆಂಬರ್ನಲ್ಲಿ ವರದಿಗಳು ತಿಳಿಸಿದ್ದವು. ಐಫೋನ್ನ ಪ್ರಖ್ಯಾತ ಡಿಸೈನರ್ ಆಗಿರುವ ಐವ್ ಎಐ ಹಾರ್ಡ್ವೇರ್ ಯೋಜನೆಯ ಬಗ್ಗೆ ಆಲ್ಟ್ಮ್ಯಾನ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇನ್ನು ಯೋಜನೆಯ ಕುರಿತಂತೆ ಸಾಫ್ಟ್ಬ್ಯಾಂಕ್ ಸಿಇಓ ಮತ್ತು ಹೂಡಿಕೆದಾರ ಮಸಯೋಶಿ ಸನ್ ಅವರು ಇಬ್ಬರೊಂದಿಗೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಓಪನ್ಎಐನ ಹಾರ್ಡ್ವೇರ್ ತಯಾರಿಕೆಯ ಪ್ರಯತ್ನಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಓಪನ್ಎಐ ಒಂದೊಮ್ಮೆ ರೊಬೊಟಿಕ್ಸ್ ಸಂಶೋಧನಾ ವಿಭಾಗವನ್ನು ಹೊಂದಿತ್ತು. ಆದರೆ ತಾಂತ್ರಿಕ ಅಡಚಣೆಗಳನ್ನು ಎದುರಿಸಿದ ನಂತರ ಅದನ್ನು ಜುಲೈ 2021 ರಲ್ಲಿ ಬಂದ್ ಮಾಡಲಾಗಿತ್ತು.
ಇದನ್ನೂ ಓದಿ : ಫೇಸ್ಬುಕ್, ಇನ್ಸ್ಟಾಗಾಗಿ 2 ಹೊಸ AI ವಿಡಿಯೋ ಎಡಿಟಿಂಗ್ ಸಾಧನ ಪರಿಚಯಿಸಿದ ಮೆಟಾ