ನವದೆಹಲಿ : ಬೃಹತ್ ಪ್ರಮಾಣದ ಡೇಟಾ ಟ್ರಾಫಿಕ್ಗೆ ಕಾರಣವಾಗುತ್ತಿರುವ ಓವರ್ - ದಿ - ಟಾಪ್ (ಒಟಿಟಿ) ಕಂಪನಿಗಳು ತಾವು ಒದಗಿಸುವ ಸೇವೆಗಳಿಗಾಗಿ ಟೆಲಿಕಾಂ / ಮೊಬೈಲ್ ಸೇವಾ ಪೂರೈಕೆದಾರರಿಗೆ ನ್ಯಾಯಯುತ ಮತ್ತು ಪ್ರಮಾಣಕ್ಕೆ ಅನುಗುಣವಾದ ಪಾಲು ಪಾವತಿಸುವಂತೆ ಕಾನೂನು ರಚಿಸಬೇಕೆಂದು ಟೆಲಿಕಾಂ ಉದ್ಯಮದ ಕಂಪನಿಗಳು ಗುರುವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿವೆ. ಒಟಿಟಿ ಪೂರೈಕೆದಾರರು ಸಮಂಜಸವಾದ 'ಬಳಕೆ ಶುಲ್ಕ' ಪಾವತಿಸಬೇಕೆಂಬ ತಮ್ಮ ಬೇಡಿಕೆ ನ್ಯಾಯಯುತ ಮತ್ತು ತರ್ಕಬದ್ಧವಾಗಿದೆ ಎಂದು ಟೆಲಿಕಾಂ ಕಂಪನಿಗಳು ಹೇಳಿವೆ.
ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ 5 ಜಿ ನೆಟ್ವರ್ಕ್ ಅನ್ನು ಅಳವಡಿಸಿಕೊಳ್ಳುತ್ತಿದೆ ಮತ್ತು ಇದಕ್ಕಾಗಿ 3.3 ಲಕ್ಷಕ್ಕೂ ಹೆಚ್ಚು 5 ಜಿ ಬೇಸ್ ಟ್ರಾನ್ಸೀವರ್ ಸ್ಟೇಷನ್ಗಳನ್ನು (ಬಿಟಿಎಸ್) ಟೆಲಿಕಾಂ ಸೇವಾ ಪೂರೈಕೆದಾರರು ಈಗಾಗಲೇ ನಿಯೋಜಿಸಿದ್ದಾರೆ.
"ನೆಟ್ವರ್ಕ್ಗಳನ್ನು ನಿಯೋಜಿಸಲು ಮತ್ತು ದೇಶಾದ್ಯಂತ ಸಂಪೂರ್ಣವಾಗಿ ಸಂಪರ್ಕವನ್ನು ತಲುಪಿಸಲು ಟೆಲಿಕಾಂ ಕಂಪನಿಗಳು ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿವೆ. ಈ ಮಧ್ಯೆ ಒಟಿಟಿ ಕಂಪನಿಗಳು ದೊಡ್ಡ ಬ್ಯಾಂಡ್ವಿಡ್ತ್ಗೆ ಕಾರಣವಾಗುವ ಸೇವೆಗಳನ್ನು ಒದಗಿಸುತ್ತಿವೆ ಮತ್ತು ಇದರಿಂದ ಅತ್ಯಧಿಕ ಡೇಟಾ ಟ್ರಾಫಿಕ್ ಸೃಷ್ಟಿಸುತ್ತಿವೆ. ಇದರಿಂದ ಟೆಲಿಕಾಂ ಕಂಪನಿಗಳು ತಮ್ಮ ನೆಟ್ವರ್ಕ್ಗಳನ್ನು ಮತ್ತಷ್ಟು ಅಪ್ಗ್ರೇಡ್ ಮಾಡುವ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ಆದರೆ, ಒಟಿಟಿಗಳು ನೆಟ್ವರ್ಕ್ ಸ್ಥಾಪನೆಯ ವೆಚ್ಚಗಳಿಗೆ ಯಾವುದೇ ಕೊಡುಗೆ ನೀಡುತ್ತಿಲ್ಲ" ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಸಿಒಎಐ) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಡಾ.ಎಸ್.ಪಿ.ಕೊಚ್ಚರ್ ವಿಷಾದಿಸಿದರು.
ಒಟಿಟಿಗಳು ಮುಖ್ಯವಾಗಿ ಬೃಹತ್ ಆದಾಯವನ್ನು ಹೊಂದಿರುವ ದೊಡ್ಡ ಜಾಗತಿಕ ಕಾರ್ಪೊರೇಟ್ ಘಟಕಗಳ ಒಡೆತನದಲ್ಲಿವೆ. ಈ ಕಂಪನಿಗಳು ಗ್ರಾಹಕರು ಮತ್ತು ಜಾಹೀರಾತುದಾರರಿಂದ ಎರಡು ಮೂಲಗಳಿಂದ ಆದಾಯ ಪಡೆಯುತ್ತಿವೆ. ಆದಾಗ್ಯೂ, ಅವರು ತಮ್ಮ ಆದಾಯದಿಂದ ಭಾರತೀಯ ಆರ್ಥಿಕತೆಗೆ ಯಾವುದೇ ಕೊಡುಗೆ ನೀಡುತ್ತಿಲ್ಲ. ಅವರ ಎಲ್ಲ ಆದಾಯವು ಅವರ ಮೂಲ ದೇಶಕ್ಕೆ ಹೋಗುತ್ತದೆ. ಈ ಒಟಿಟಿಗಳು ಜಾಗತಿಕವಾಗಿ ಅತಿದೊಡ್ಡದೆಂದು ಗುರುತಿಸಲ್ಪಟ್ಟಿರುವ ಭಾರತೀಯ ಮಾರುಕಟ್ಟೆಗೆ ತಮ್ಮ ಕೊಡುಗೆ ನೀಡಬೇಕಿದೆ ಎಂದು ಸಿಒಎಐ ನಂಬಿದೆ" ಎಂದು ಅವರು 'ಒಟಿಟಿ ಸೇವೆಗಳ ನಿಯಂತ್ರಣ ಕಾರ್ಯವಿಧಾನ' ಕುರಿತ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಮೊಬೈಲ್ ನೆಟ್ವರ್ಕ್ ಸೇವೆಗಳನ್ನು ಆರಂಭಿಸಲು ಲಾಭದಾಯಕವಾದ ವ್ಯವಹಾರವನ್ನು ಹೊಂದಿರದ ಗ್ರಾಮೀಣ ಪ್ರದೇಶಗಳಲ್ಲಿಯೂ ಒಟಿಟಿಗಳು ಡೇಟಾ ಸೇವೆಗಳು ಮತ್ತು ಹೆಚ್ಚಿನ ಬ್ಯಾಂಡ್ವಿಡ್ತ್ಗೆ ಕಾರಣವಾಗಿವೆ. "ಆದ್ದರಿಂದ ಆದಾಯ ಉತ್ಪಾದನೆಯ ದೃಷ್ಟಿಯಿಂದ ಟೆಲಿಕಾಂ ಸೇವಾ ಪೂರೈಕೆದಾರರ ಗಮನವು ಈಗ ನೆಟ್ವರ್ಕ್ಗಳು, ಅಪ್ಲಿಕೇಶನ್ಗಳು ಮತ್ತು ಒಟಿಟಿಗಳನ್ನು ಒಳಗೊಂಡಿರುವ ಹೊಸ ಸೇವೆಗಳ ಮೇಲೆ ಇರುತ್ತದೆ" ಎಂದು ಸಿಒಎಐ ಹೇಳಿದೆ.
ಹೆಚ್ಚಿನ ಬ್ಯಾಂಡ್ವಿಡ್ತ್ ಒಟಿಟಿ ಅಪ್ಲಿಕೇಶನ್ಗಳು ಎಚ್ಡಿ ವೀಡಿಯೊ ಸ್ಟ್ರೀಮಿಂಗ್, ಡೌನ್ಲೋಡ್ ಮತ್ತು ಶೇರಿಂಗ್ ನಲ್ಲಿ ಭಾರಿ ಡೇಟಾ ಟ್ರಾಫಿಕ್ ಉಂಟು ಮಾಡುತ್ತವೆ. ತಮ್ಮ ವ್ಯವಹಾರವನ್ನು ಸುಗಮಗೊಳಿಸಲು ಒಟಿಟಿಗಳು ನೆಟ್ವರ್ಕ್ ಪೂರೈಕೆದಾರರಿಗೆ ಪ್ರಮಾಣಾನುಗುಣ ಶುಲ್ಕವನ್ನು ಪಾವತಿಸಬೇಕಾಗಿದೆ ಎಂದು ಉದ್ಯಮ ಸಂಸ್ಥೆ ವಾದಿಸಿದೆ. ಹೆಚ್ಚಿನ ದಟ್ಟಣೆಯನ್ನು ಉಂಟುಮಾಡದ ಕಡಿಮೆ ಬ್ಯಾಂಡ್ವಿಡ್ತ್ ಅಪ್ಲಿಕೇಶನ್ಗಳಿಗೆ ಸಾಮಾನ್ಯ ಡೇಟಾ ಟ್ಯಾರಿಫ್ಗಳು ಸಾಕು ಎಂದು ಅದು ಹೇಳಿದೆ.
ಇದನ್ನೂ ಓದಿ : ಎಲ್ಲ ದಾಖಲೆಗಳು, ನೋಂದಣಿಗಳಿಗೆ ಜನನ ಪ್ರಮಾಣ ಪತ್ರವೇ ಮೂಲಾಧಾರ: ಅ.1 ರಿಂದ ಜಾರಿ