ಬಹುತೇಕ ಜನರು ತಮ್ಮ ಪ್ರಯಾಣದ ವೇಳೆ ಗೂಗಲ್ ಮ್ಯಾಪ್ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಇದೀಗ ಭಾರತದಲ್ಲಿ ಬಳಕೆದಾರರಿಗಾಗಿ ಐದು ಫೀಚರ್ಗಳನ್ನು ಗೂಗಲ್ ಮ್ಯಾಪ್ ಪರಿಚಯಿಸುತ್ತಿದೆ. ನೀವು ಸಂಚರಿಸುತ್ತಿರುವ ಮಾರ್ಗದಲ್ಲಿ ಬರುವ ಟ್ರಾಫಿಕ್ ಸಿಗ್ನಲ್ಗಳು, ಟೋಲ್‌ಗೇಟ್‌ಗಳ ಬಗ್ಗೆ ಮೊದಲೇ ಈ ಹೊಸ ಫೀಚರ್ಗಳಿಂದ ತಿಳಿದುಕೊಳ್ಳಬಹುದಾಗಿದೆ.
ಐದು ಹೊಸ ಫೀಚರ್ಗಳು ಯಾವುವು?: ಸ್ಪಷ್ಟ ಮತ್ತು ನಿಖರ ಮಾಹಿತಿಗಾಗಿ ಗೂಗಲ್ ಮ್ಯಾಪ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗ ತನ್ನ ಬಳಕೆದಾರರಿಗಾಗಿ ಹೊಸ-ಹೊಸ ಮಾಹಿತಿಯನ್ನು ಗೂಗಲ್ ಅಳವಡಿಸುತ್ತಿದೆ. ಶೀಘ್ರದಲ್ಲೇ ಬಳಕೆದಾರರು ಪಡೆಯಬಹುದಾದ ಈ ಹೊಸ ಫೀಚರ್ಗಳು ವಿವರ ಹೀಗಿದೆ.
ಟ್ರಾಫಿಕ್ ಸ್ನಿಗಲ್: ಇನ್ನುಂದೆ ನಿಮ್ಮ ಗೂಗಲ್ ಮ್ಯಾಪ್ನಲ್ಲೇ ನೀವು ಹೋಗುತ್ತಿರುವ ಮಾರ್ಗದಲ್ಲಿ ಬರುವ ಟ್ರಾಫಿಕ್ ಸಿಗ್ನಲ್ಗಳು ಮತ್ತು ಸ್ಟಾಪ್ಗಳ ಮಾಹಿತಿ ಲಭ್ಯವಾಗಲಿದೆ. ನೀವು ಹೋಗುತ್ತಿರುವ ನಗರ, ಅಲ್ಲಿನ ರಸ್ತೆಗಳ ಆಕಾರ ಮತ್ತು ಅಳತೆ ಬಗ್ಗೆಯೂ ಗೊತ್ತಾಗಲಿದೆ.
ಶುಲ್ಕರಹಿತ ಟೋಲ್ ಮಾರ್ಗ: ನೀವು ಸಂಚರಿಸುವ ರಸ್ತೆಗಳಲ್ಲಿ ಶುಲ್ಕರಹಿತವಾಗಿ ಹೋಗಬೇಕಾದರೆ, ಅದರ ಮಾಹಿತಿ ಕೂಡ ಈಗ ಗೂಗಲ್ ಮ್ಯಾಪ್ನಲ್ಲಿ ಸಿಗಲಿದೆ. ನೀವು ಸಂಚರಿಸುತ್ತಿರುವ ಸಂದರ್ಭದಲ್ಲೇ ಶುಲ್ಕರಹಿತ ಟೋಲ್ ಮಾರ್ಗಗಳ ಲಭ್ಯತೆ ಬಗ್ಗೆ ಆ್ಯಪ್ ತಿಳಿಸಲಿದೆ. ಜತೆಗೆ ಆ ಮಾರ್ಗವನ್ನೂ ಆಯ್ಕೆ ರೂಪವಾಗಿ ತೋರಿಸಲಿದೆ.
ಮೊದಲೇ ಟೋಲ್ ಶುಲ್ಕದ ಮಾಹಿತಿ: ಕೆಲವೊಮ್ಮೆ ನಿಮಗೆ ಟೋಲ್ಗೇಟ್ ಶುಲ್ಕದ ತಿಳಿಯದೇ ಇದ್ದರೆ, ಅದು ಕೂಡ ಈಗ ಗೂಗಲ್ ಮ್ಯಾಪ್ನಲ್ಲಿ ಲಭ್ಯವಾಗಲಿದೆ. ನೀವು ಆರಂಭಿಸಿದ ಸ್ಥಳದಿಂದ ಎಲ್ಲಿಗೆ ನೀವು ಪ್ರಯಾಣಿಸುತ್ತಿರೋ, ಆ ಮಾರ್ಗದಲ್ಲಿ ಬರುವ ಟೋಲ್ಗೇಟ್ ಹಾಗೂ ಶುಲ್ಕದ ಬಗ್ಗೆ ಮೊದಲೇ ತಿಳಿಸಲಿದೆ. ಇದರಿಂದ ನಿಮ್ಮ ಪ್ರಯಾಣದಲ್ಲಿ ಬರುವ ಟೋಲ್ ವೆಚ್ಚವನ್ನು ಮೊದಲೇ ಅಂದಾಜಿಸಲು ಸುಲಭವಾಗಲಿದೆ.
ಆ್ಯಪಲ್ ವಾಚ್ನಲ್ಲಿ ಗೂಗಲ್ ಆ್ಯಪ್: ನಿಮ್ಮಲ್ಲಿ ಆ್ಯಪಲ್ ಗಡಿಯಾರ (ವಾಚ್) ಇದ್ದರೆ ಈಗ ಅದರಲ್ಲೂ ಗೂಗಲ್ ಆ್ಯಪ್ ಬರಲಿದೆ. ಗೂಗಲ್ ಮ್ಯಾಪ್ ತೋರಿಸುವ ಮಾರ್ಗಗಳನ್ನೂ ನಿಮ್ಮ ವಾಚ್ನಲ್ಲೇ ನೀವು ನೋಡಿಕೊಳ್ಳಬಹುದಾಗಿದೆ. ಆ್ಯಪಲ್ ವಾಚ್ನಲ್ಲಿ ಗೂಗಲ್ ಮ್ಯಾಪ್ನ್ನು ಟ್ಯಾಪ್ ಮಾಡಿದರೆ ಸಾಕು ಸಂಚಾರದ ರೂಟ್ಗಳು ನೇರವಾಗಿ ಬರಲಿವೆ.
ಐಫೋನ್ನ ಹೋಂಸ್ಕ್ರೀನ್: ಗೂಗಲ್ ಮ್ಯಾಪ್ನ್ನು ಐಫೋನ್ನ ಹೋಂಸ್ಕ್ರೀನ್ನಲ್ಲೇ ಇನ್ಮುಂದೆ ಬಳಕೆದಾರರು ನೋಡಬಹುದಾಗಿದೆ. ಇದರಿಂದ ಗೂಗಲ್ ಮ್ಯಾಪ್ ಬಳಕೆ ಐಫೋನ್ ಹೊಂದಿವರಿಗೆ ಇನ್ನಷ್ಟು ಸುಲಭವಾಗಲಿದೆ. ಈ ಎಲ್ಲ ಫೀಚರ್ಗಳು ಕೆಲ ವಾರಗಳಲ್ಲೇ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆ ಇದೆ.