ಸ್ಯಾನ್ ಫ್ರಾನ್ಸಿಸ್ಕೋ : ಹಾಲಿವುಡ್ ಮುಷ್ಕರದ ಸಂದರ್ಭದಲ್ಲಿ ಕಳೆದುಹೋದ ಆದಾಯವನ್ನು ಸರಿದೂಗಿಸಲು ಸ್ಟ್ರೀಮಿಂಗ್ ದೈತ್ಯ ನೆಟ್ಫ್ಲಿಕ್ಸ್ ತನ್ನ ಸ್ಟ್ರೀಮಿಂಗ್ ಸೇವೆಯ ಬೆಲೆಯನ್ನು ಮತ್ತೆ ಹೆಚ್ಚಿಸಲು ಯೋಜಿಸುತ್ತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಮುಷ್ಕರ ಮುಗಿದ ಕೆಲವು ತಿಂಗಳುಗಳ ನಂತರ ಕಂಪನಿಯು ಬೆಲೆ ಏರಿಕೆಯನ್ನು ಘೋಷಿಸಬಹುದು ಎಂದು ಹೇಳಲಾಗಿತ್ತು. ಅಂದರೆ ಮುಂಬರುವ ವಾರಗಳಲ್ಲಿ ಬೆಲೆ ಏರಿಕೆಯಾಗಬಹುದು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಆರಂಭದಲ್ಲಿ ಕೆನಡಾ ಮತ್ತು ಅಮೆರಿಕದಲ್ಲಿ ಬೆಲೆಗಳು ಹೆಚ್ಚಾಗಲಿವೆ. ನೆಟ್ಫ್ಲಿಕ್ಸ್ ತನ್ನ ಚಂದಾದಾರಿಕೆ ಬೆಲೆಯನ್ನು ಎಷ್ಟು ಹೆಚ್ಚಿಸಲಿದೆ ಎಂಬುದು ಗೊತ್ತಾಗಿಲ್ಲ. ಸ್ಟ್ರೀಮಿಂಗ್ ಸೇವಾ ಕಂಪನಿಗಳು ತಮಗೆ ಹೆಚ್ಚಿನ ವೇತನ ನೀಡಬೇಕೆಂದು ಮತ್ತು ಬಾಕಿ ಪಾವತಿಗಳಿಗೆ ಒತ್ತಾಯಿಸಿ 15,000 ಕ್ಕೂ ಹೆಚ್ಚು ಟಿವಿ ಮತ್ತು ಚಲನಚಿತ್ರ ನಟರು ಜುಲೈನಲ್ಲಿ ಮುಷ್ಕರ ನಡೆಸಿದ್ದರು
ಸುಮಾರು 160,000 ನಟರನ್ನು ಪ್ರತಿನಿಧಿಸುವ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್-ಅಮೆರಿಕನ್ ಫೆಡರೇಶನ್ ಆಫ್ ಟೆಲಿವಿಷನ್ ಅಂಡ್ ರೇಡಿಯೋ ಆರ್ಟಿಸ್ಟ್ಸ್, ಬಾಕಿ ಪಾವತಿಗಳು ಮತ್ತು ಎಐ ಬಳಕೆಗೆ ಸಂಬಂಧಿಸಿದಂತೆ ಮೋಷನ್ ಪಿಕ್ಚರ್ ಮತ್ತು ಟೆಲಿವಿಷನ್ ಪ್ರೊಡ್ಯೂಸರ್ಸ್ ಅಲಯನ್ಸ್ ಜೊತೆಗೆ ಒಪ್ಪಂದಕ್ಕೆ ಬರಲು ವಿಫಲವಾದ ನಂತರ ಯೂನಿಯನ್ ಮುಷ್ಕರ ನಡೆಸುತ್ತಿದೆ.
ಕಳೆದ ವರ್ಷ ನೆಟ್ಫ್ಲಿಕ್ಸ್ ತನ್ನ ಎಲ್ಲಾ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿತ್ತು. ಜಾಹೀರಾತು-ಮುಕ್ತ ಸ್ಟ್ಯಾಂಡರ್ಡ್ ಶ್ರೇಣಿಯ ಸೇವೆಗೆ ತಿಂಗಳಿಗೆ $ 15.49 ಮತ್ತು ಪ್ರೀಮಿಯಂ ಯೋಜನೆಯ ಬೆಲೆಯನ್ನು ತಿಂಗಳಿಗೆ $ 19.99 ಕ್ಕೆ ಹೆಚ್ಚಿಸಲಾಗಿತ್ತು. ಕಂಪನಿಯು ತಿಂಗಳಿಗೆ $ 6.99 ಜಾಹೀರಾತು ಬೆಂಬಲಿತ ಯೋಜನೆಯನ್ನು ಪರಿಚಯಿಸಿತ್ತು ಮತ್ತು ಅದರ ನಂತರ ತಿಂಗಳಿಗೆ $ 9.99 ಮೂಲ ಜಾಹೀರಾತು-ಮುಕ್ತ ಯೋಜನೆಯನ್ನು ನಿಲ್ಲಿಸಿತು.
ಕಂಪನಿಯು ಈ ವರ್ಷದ ಆರಂಭದಲ್ಲಿ ಪಾಸ್ವರ್ಡ್ ಶೇರಿಂಗ್ ಅನ್ನು ನಿಲ್ಲಿಸಿತ್ತು. ನಿಮ್ಮ ಖಾತೆಯನ್ನು ನಿಮ್ಮ ಮನೆಯ ಹೊರಗಿನವರೊಂದಿಗೆ ಹಂಚಿಕೊಳ್ಳಲು ತಿಂಗಳಿಗೆ ಹೆಚ್ಚುವರಿ $ 7.99 ಶುಲ್ಕ ವಿಧಿಸಲು ಪ್ರಾರಂಭಿಸಿತು.
ನೆಟ್ಫ್ಲಿಕ್ಸ್ ಇದೊಂದು ಆನ್ಲೈನ್ ಸ್ಟ್ರೀಮಿಂಗ್ ಸೇವೆಯಾಗಿದ್ದು, 1,000 ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು ಇದರಲ್ಲಿ ಲಭ್ಯವಿದೆ. ಟಿವಿಗಳು, ಟ್ಯಾಬ್ಲೆಟ್ ಗಳು, ಫೋನ್ ಗಳು, ಗೇಮ್ ಕನ್ಸೋಲ್ ಗಳು ಮತ್ತು ಸೆಟ್-ಟಾಪ್ ಬಾಕ್ಸ್ ಗಳು ಸೇರಿದಂತೆ ವಿವಿಧ ರೀತಿಯ ಸಾಧನಗಳಿಗೆ ಇಂಟರ್ನೆಟ್ ಸಂಪರ್ಕದ ಮೂಲಕ ಅವುಗಳನ್ನು ಸ್ಟ್ರೀಮ್ ಮಾಡಲಾಗುತ್ತದೆ. ನೀವು ನೆಟ್ಫ್ಲಿಕ್ಸ್ ಅನ್ನು ಕಂಪ್ಯೂಟರ್ನಲ್ಲಿಯೂ ವೀಕ್ಷಿಸಬಹುದು.
ಇದನ್ನೂ ಓದಿ : ಈ ವರ್ಷ 5G ಫೋನ್ ಖರೀದಿಸಲಿದ್ದಾರೆ 3 ಕೋಟಿ ಜನ!