ವಾಷಿಂಗ್ಟನ್( ಅಮೆರಿಕ): ನಾಸಾ ಮಂಗಳ ಗ್ರಹಕ್ಕೆ ಕಳುಹಿಸಿದ್ದ ಪರ್ಸಿವರೆನ್ಸ್ ರೋವರ್ ಕೆಲವು ದಿನಗಳ ಹಿಂದೆ ಅಲ್ಲಿನ ಕಲ್ಲುಗಳನ್ನು ಸಂಗ್ರಹಿಸಿ, ಸಾಕಷ್ಟು ಕುತೂಹಲವನ್ನು ಬಾಹ್ಯಾಕಾಶ ವಲಯದಲ್ಲಿ ಹುಟ್ಟುಹಾಕಿತ್ತು. ಈಗ ಮತ್ತೊಮ್ಮೆ ಅಂತಹ ಕಲ್ಲುಗಳನ್ನು ಪರ್ಸಿವರೆನ್ಸ್ ಸಂಗ್ರಹಿಸಿದೆ.
ಈ ಮೊದಲು ಅಂದರೆ ಸೆಪ್ಟೆಂಬರ್ 6ರಂದು ಸಂಗ್ರಹಿಸಿದ್ದ ಕಲ್ಲುಗಳನ್ನು ಮಾಂಟ್ಡೇನಿಯರ್ ಎಂದು ಹೆಸರಿಸಲಾಗಿದ್ದು, ಸೆಪ್ಟೆಂಬರ್ 8ರಂದು ಅದೇ ಬಂಡೆಯಿಂದ ಮತ್ತೊಮ್ಮೆ ಸಂಗ್ರಹ ಮಾಡಿದ್ದು, ಮೊಂಟಾಗ್ನಾಕ್ ಎಂದು ಹೆಸರಿಸಲಾಗಿದೆ.
ಮಾಂಟ್ಡಿನಿಯರ್ ಮತ್ತು ಮೊಂಟಾಗ್ನಾಕ್ ಮಾದರಿಗಳನ್ನು ತೆಗೆದ ಬಂಡೆಗಳ ವಿಶ್ಲೇಷಣೆಗೆ ಭವಿಷ್ಯದಲ್ಲಿ ಒಳಪಡಿಸಲಾಗುತ್ತದೆ. ಈ ಮೂಲಕ ಆ ಕಲ್ಲುಗಳು ಜ್ವಾಲಾಮುಖಿಯಿಂದಾಗಿಯೇ? ಅಥವಾ ನೀರಿನ ಮೂಲಗಳಿವೆಯೇ ಎಂಬ ಬಗ್ಗೆ ಸಂಶೋಧನೆ ಮಾಡಲಾಗುತ್ತದೆ.
ಮಂಗಳನಲ್ಲಿನ ಕಲ್ಲುಗಳನ್ನು ನೋಡಿದರೆ, ಆ ಪ್ರದೇಶದಲ್ಲಿ ವಾಸಯೋಗ್ಯ ಪರಿಸರ ಇದ್ದಿರಬಹುದು ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೋರೇಟರಿ (ಜೆಪಿಎಲ್) ನೇತೃತ್ವದ ಮಿಷನ್ನ ಯೋಜನಾ ವಿಜ್ಞಾನಿ ಕೆನ್ ಫರ್ಲೆ ಹೇಳಿದ್ದಾರೆ.
ಈಗ ದೊರೆತಿರುವ ಕಲ್ಲುಗಳ ಮಾದರಿ ನೋಡಿದರೆ, ಅವುಗಳು ಬಸಾಲ್ಟ್ ಶಿಲೆಯ ವರ್ಗಕ್ಕೆ ಸೇರಿದವು ಎನ್ನಿಸುತ್ತದೆ. ಒಂದು ವೇಳೆ ಅವುಗಳು ಬಸಾಲ್ಟ್ ಶಿಲೆಗಳ ವರ್ಗಕ್ಕೆ ಸೇರಿದವುಗಳಾಗಿದ್ದರೆ, ಜ್ವಾಲಾಮುಖಿ ಮೂಲಕ ಅವುಗಳು ಉತ್ಪತ್ತಿಯಾಗಿವೆ ಎಂದು ಹೇಳಬಹುದು ಎಂದಿದ್ದಾರೆ.
ಈ ಕಲ್ಲುಗಳು ರೇಡಿಯೋಮೆಟ್ರಿಕ್ ಡೇಟಿಂಗ್ (Radiometric Dating) ಪ್ರಕ್ರಿಯೆಗೆ ಸಹಕಾರಿಯಾಗಲಿದ್ದು, ಅವುಗಳ ಮೂಲಕ ಮಂಗಳನ ಆ ಪ್ರದೇಶದ ಕಾಲಾವಧಿಯನ್ನು ಅಳೆಯಲು ಸಾಧ್ಯವಾಗಬಹುದು. ಒಂದು ವೇಳೆ, ನೀರಿದ್ದ ಬಗ್ಗೆ ಕುರುಹು ಸಿಕ್ಕರೆ, ಅದೊಂದು ದೊಡ್ಡ ವಿಚಾರವಾಗುತ್ತದೆ ಎಂದು ಕೆನ್ ಫರ್ಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಈಗ ಪರ್ಸಿವರೆನ್ಸ್ ರೋವರ್ ಜೆಝೆರೋ ಕ್ರೇಟರ್ನಲ್ಲಿದ್ದು, ಜೆಝೆರೋ ಕ್ರೇಟರ್ನ ರಚನೆ, ಅಲ್ಲಿತ್ತು ಎನ್ನಲಾದ ಸರೋವರ ಅದೃಶ್ಯವಾದ ಬಗ್ಗೆ ಮತ್ತು ಮಂಗಳ ಗ್ರಹದ ವಾತಾವರಣ ಮುಂತಾದ ವಿಚಾರಗಳ ಬಗ್ಗೆ ಈ ಕಲ್ಲುಗಳ ಬಗ್ಗೆ ಸಂಶೋಧನೆ ನಡೆಸಿದ ನಂತರ ಗೊತ್ತಾಗಲಿದೆ.
ಇದನ್ನೂ ಓದಿ: ವಿವೇಕಾನಂದರ ಚಿಕಾಗೋ ಭಾಷಣ ನಮ್ಮ ಸಂಸ್ಕೃತಿಯನ್ನು ಸುಂದರವಾಗಿ ಪ್ರದರ್ಶಿಸಿದೆ: ಮೋದಿ