ನವದೆಹಲಿ: ಎಲೋನ್ ಮಸ್ಕ್ ಒಡೆತನದ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಶೀಘ್ರದಲ್ಲೇ ಬಳಕೆದಾರರು ಆಡಿಯೋ ಮತ್ತು ವಿಡಿಯೋ ಕಾಲ್ ವೈಶಿಷ್ಟ್ಯವನ್ನು ಪಡೆಯಬಹುದಾಗಿದೆ. ಇದು ಐಒಎಸ್, ಆಂಡ್ರಾಯ್ಡ್, ಮ್ಯಾಕ್ ಮತ್ತು ಪಿಸಿಗಳಿಗೂ ಬೆಂಬಲಿಸಲಿದೆ ಎಂದು ವರದಿ ತಿಳಿಸಿದೆ.
ಇನ್ನು, ಈ ವಿಡಿಯೋ ಮತ್ತು ಆಡಿಯೋ ಕಾಲಿಂಗ್ ಸೌಲಭ್ಯ ಪಡೆಯಲು ಫೋನ್ ಸಂಖ್ಯೆ ಕಡ್ಡಾಯವಾಗಿಲ್ಲ. ನಿಮ್ಮ ಫೋನ್ ನಂಬರ್ ನೀಡದೇ ಎಕ್ಸ್ನಲ್ಲಿರುವ ನಿಮ್ಮ ಸ್ನೇಹಿತರಿಗೆ ಇದೀಗ ವಿಡಿಯೋ ಚಾಟ್ ಮಾಡಿ ಮಾತನಾಡಬಹುದು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿರುವ ಮಸ್ಕ್, ಎಕ್ಸ್ನಲ್ಲಿ ವಿಡಿಯೋ ಮತ್ತು ಆಡಿಯೋ ಕಾಲ್ ಬರಲಿದೆ. ಇದು ಐಒಎಸ್, ಆಂಡ್ರಾಯ್ಡ್, ಮ್ಯಾಕ್ ಮತ್ತು ಪರ್ಸನಲ್ ಕಂಪ್ಯೂಟರ್ನಲ್ಲಿ ಕೆಲಸ ಮಾಡಲಿದೆ. ಈ ಕರೆ ಮಾಡಲು ಯಾವುದೇ ಫೋನ್ ನಂಬರ್ ಅವಶ್ಯಕತೆ ಇಲ್ಲ. ಎಕ್ಸ್ ಜಾಗತಿಕವಾಗಿ ಪರಿಣಾಮಕಾರಿ ಅಡ್ರೆಸ್ ಬುಕ್ ಆಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ, ಈ ಹೊಸ ಅಂಶವೂ ವಿಶಿಷ್ಟವಾಗಿರಲಿದೆ ಎಂದಿದ್ದಾರೆ. ಇನ್ನು ಯಾವಾಗಿನಿಂದ ಈ ವೈಶಿಷ್ಟ್ಯ ಲಭ್ಯವಿದೆ ಎಂಬುದರ ಕುರಿತು ಮಸ್ಕ್ ತಿಳಿಸಿಲ್ಲ. ಕಳೆದ ಜುಲೈನಲ್ಲಿ ಸಂಸ್ಥೆಯ ಡಿಸೈನರ್ ಆಂಡ್ರ್ಯೂ ಕೊನ್ವೆ ಈ ವೈಶಿಷ್ಟ್ಯವನ್ನು ಎಕ್ಸ್ಗೆ ಪರಿಯಿಸುವುದರ ಸುಳಿವನ್ನು ನೀಡಿದ್ದರು. ಈ ವೈಶಿಷ್ಟ್ಯ ಕುರಿತು ಅವರು ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದರು.
ಮಸ್ಕ್, ಎಕ್ಸ್ ಮೈಕ್ರೋಬ್ಲಾಗಿಂಗ್ ಅನ್ನು ಚೀನಾದ ಎವರಿಥಿಂಗ್ ಆ್ಯಪ್ನಂತೆ ರೂಪಿಸುವ ದೃಷ್ಟಿಯನ್ನು ಹೊಂದಿದ್ದರು. ಅದರ ಭಾಗವಾಗಿ ಇದೀಗ ಈ ಹೊಸ ಫೀಚರ್ ಪರಿಚಯಿಸಲಾಗುತ್ತಿದೆ. ಟ್ವಿಟರ್ ಅನ್ನು ಖರೀದಿಸುವ ಮೂಲಕ ಅದರಲ್ಲಿ ಎಲ್ಲ ತಂತ್ರಜ್ಞಾನದ ಸೌಲಭ್ಯ ಬಳಕೆದಾರರಿಗೆ ಒಂದೇ ತಾಣದಲ್ಲಿ ಸಿಗುವಂತೆ ರೂಪಿಸುವುದಾಗಿ ಕಳೆದ ಅಕ್ಟೋಬರ್ನಲ್ಲಿ ಘೋಷಿಸಿದ್ದರು.
ಮಸ್ಕ್ ಈ ಘೋಷಣೆ ಮಾಡುತ್ತಿದ್ದಂತೆ, ಅನೇಕ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿದ್ದು, ಇದೀಗ ಎಕ್ಸ್ ಮೂಲಕವೇ ನೇರವಾಗಿ ಅನೇಕರಿಗೆ ಕರೆ ಮಾಡಿ ಡೊಗೆಕಾಯಿನ್ ಕೊಳ್ಳುವಂತೆ ಹೇಳಬಹುದು ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು, ಈ ಕರೆ ವೇಳೆ ಖಾಸಗಿ ಆಯ್ಕೆ ಒತ್ತು ನೀಡುವ ಮೂಲಕ ರ್ಯಾಂಡಮ್ ಕರೆಗಳನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ನಾನು ಯಾರನ್ನಾದರೂ ಫಾಲೋ ಮಾಡುತ್ತೇನೆ ಎಂದರೆ ಅದರ ಅರ್ಥ ಅವರಿಗೆ ಕರೆ ಮಾಡುತ್ತೇನೆ ಎಂದು ಅರ್ಧವಲ್ಲ ಎಂದಿದ್ದಾರೆ.
ಇನ್ನು ಇತ್ತೀಚೆಗಷ್ಟೆ ಎಕ್ಸ್ ಮುಂಬರುವ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾಹೀರಾತು ನೀಡಲು ಅಭ್ಯರ್ಥಿಗಳು ಮತ್ತು ಪಕ್ಷಗಳಿಗೆ ಅವಕಾಶವನ್ನು ನೀಡಿತ್ತು.
ಇದನ್ನೂ ಓದಿ: ಹೆಲ್ತ್ ಟ್ರ್ಯಾಕಿಂಗ್‌ಗೆ ಬಂತು ಸ್ಮಾರ್ಟ್ ಉಂಗುರ! ಇದು ಬೆಂಗಳೂರಿನ ಸಂಸ್ಥೆಯ ಅವಿಷ್ಕಾರ