ಸ್ಯಾನ್ ಫ್ರಾನ್ಸಿಸ್ಕೋ : ಐಫೋನ್ ಹೊಂದಿರುವ ಸುಮಾರು ಶೇಕಡಾ 80 ರಷ್ಟು ಸ್ಮಾರ್ಟ್ ವಾಚ್ ಬಳಕೆದಾರರು ಆ್ಯಪಲ್ ವಾಚ್ ಕೂಡ ಹೊಂದಿದ್ದಾರೆ ಎಂದು ವರದಿಯೊಂದು ಹೇಳಿದೆ. ಒಂದೇ ಬ್ರ್ಯಾಂಡ್ನ ಎರಡು ವಸ್ತುಗಳನ್ನು ಬಳಸುವ ಅತ್ಯಧಿಕ ಪ್ರಮಾಣ ಇದಾಗಿದೆ. ಈ ವಿಷಯದಲ್ಲಿ ಗೂಗಲ್ ಪಿಕ್ಸೆಲ್ ಬಳಕೆದಾರರು ಎರಡನೇ ಸ್ಥಾನದಲ್ಲಿದ್ದಾರೆ. ಪಿಕ್ಸೆಲ್ ಸ್ಮಾರ್ಟ್‌ಫೋನ್ ಬಳಸುವವರ ಪೈಕಿ ಶೇ 71 ರಷ್ಟು ಜನ ಪಿಕ್ಸೆಲ್ ಸ್ಮಾರ್ಟ್‌ವಾಚ್ ಕೂಡ ಬಳಸುತ್ತಾರೆ. 2022ರಲ್ಲಿ ಅಮೆರಿಕದ ಒಟ್ಟಾರೆ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಆ್ಯಪಲ್ ಶೇ 56 ರಷ್ಟು ಪಾಲು ಪಡೆದುಕೊಂಡಿರುವುದು ಗಮನಾರ್ಹ.
ಏತನ್ಮಧ್ಯೆ, ಸ್ಮಾರ್ಟ್‌ವಾಚ್ ಹೊಂದಿರುವ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಕೇವಲ 40 ಪ್ರತಿಶತ ಜನರು ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್‌ಗಳನ್ನು ಬಳಸುತ್ತಾರೆ ಎಂದು ವರದಿ ಉಲ್ಲೇಖಿಸಿದೆ. 2022 ರ 4ನೇ ತ್ರೈಮಾಸಿಕದಲ್ಲಿ ಅಮೆರಿಕದಲ್ಲಿ ಆ್ಯಪಲ್ ಪ್ರತಿ ಮೂರು ಐಫೋನ್‌ಗಳಿಗೆ ಒಂದು ಆ್ಯಪಲ್ ವಾಚ್ ಮಾರಾಟ ಮಾಡಿದರೆ, ಪ್ರತಿ 10 ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗೆ ಸ್ಯಾಮ್‌ಸಂಗ್ ಕೇವಲ ಒಂದು ಗ್ಯಾಲಕ್ಸಿ ವಾಚ್ ಅನ್ನು ಮಾರಾಟ ಮಾಡಿದೆ. "ಆ್ಯಪಲ್ ಮತ್ತು ಐಒಎಸ್ ಯುಎಸ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ ಮತ್ತು ಐಫೋನ್ ಬಳಕೆದಾರರು ತಮ್ಮ ಉತ್ತಮ ಪರಸ್ಪರ ಕಾರ್ಯಸಾಧ್ಯತೆಯಿಂದಾಗಿ ಇತರ ಆ್ಯಪಲ್ ಉತ್ಪನ್ನಗಳನ್ನು ಬಳಸುವ ಸಾಧ್ಯತೆಯಿದೆ" ಎಂದು ಸಂಶೋಧನಾ ವಿಶ್ಲೇಷಕ ಮ್ಯಾಥ್ಯೂ ಓರ್ಫ್ ಹೇಳಿದ್ದಾರೆ.
ಆ್ಯಪಲ್‌ನ ಸ್ಮಾರ್ಟ್‌ಫೋನ್ ಇನ್ಸ್ಟಾಲ್ ಬೇಸ್ ಪಾಲು ಶೇಕಡಾ 50 ನ್ನು ಮೀರುವುದರೊಂದಿಗೆ, ಇದು ಆ್ಯಪಲ್ ವಾಚ್ ಮಾರುಕಟ್ಟೆ ವಿಸ್ತರಿಸಲು ದೊಡ್ಡ ಅವಕಾಶವನ್ನು ಹೊಂದಿದೆ. ಆದರೆ ಇತರ ಸ್ಮಾರ್ಟ್‌ವಾಚ್ ಬ್ರ್ಯಾಂಡ್‌ಗಳು ಉಳಿದ ಪಾಲಿಗಾಗಿ ಹೋರಾಡಬೇಕಿದೆ. ತಾವು ಆ್ಯಪಲ್ ಬ್ರ್ಯಾಂಡ್ ಅನ್ನು ಅತಿ ಹೆಚ್ಚಾಗಿ ಲೈಕ್ ಮಾಡುವುದರಿಂದ ಆ್ಯಪಲ್ ಸ್ಮಾರ್ಟ್‌ವಾಚ್ ಅನ್ನು ಬಳಸುತ್ತಿರುವುದಾಗಿ ಗ್ರಾಹಕರು ಹೇಳಿದ್ದಾರೆ. ಹೆಲ್ತ್ ಆ್ಯಂಡ್ ಆ್ಯಕ್ಟಿವಿಟಿ ಟ್ರ್ಯಾಕಿಂಗ್, ನೋಟಿಫಿಕೇಶನ್ ಆ್ಯಕ್ಸೆಸ್ ಮತ್ತು ಮೆಸೇಜಿಂಗ್- ಕಾಲಿಂಗ್ ಇವು ಸ್ಮಾರ್ಟ್‌ವಾಚ್ ಬಳಕೆದಾರರು ಪ್ರಮುಖವಾಗಿ ಪರಿಗಣಿಸುವ ವೈಶಿಷ್ಟ್ಯಗಳಾಗಿವೆ. ಹೆಲ್ತ್ ಆ್ಯಂಡ್ ಆ್ಯಕ್ಟಿವಿಟಿ ಟ್ರ್ಯಾಕಿಂಗ್ ವಯೋವೃದ್ಧರಲ್ಲಿ ಹಾಗೂ ನೋಟಿಫಿಕೇಶನ್ ಚೆಕಿಂಗ್ ಯುವಸಮುದಾಯದಲ್ಲಿ ಅತಿ ಜನಪ್ರಿಯ ವೈಶಿಷ್ಟ್ಯಗಳಾಗಿವೆ.
ಸ್ಟೆಪ್ ಕೌಂಟರ್, ಸ್ಲೀಪ್ ಟ್ರ್ಯಾಕರ್, ಹಾರ್ಟ್ ರೇಟ್ ಮಾನಿಟರ್ ಮತ್ತು ಬ್ಲಡ್ ಆಕ್ಸಿಜನ್ ಮಾನಿಟರ್ ಇವು ಜನರ ಮೆಚ್ಚಿನ ಹೆಲ್ತ್ ಆ್ಯಂಟ್ ಆ್ಯಕ್ಟಿವಿಟಿ ಟ್ರ್ಯಾಕರ್ನ ವೈಶಿಷ್ಟ್ಯಗಳಾಗಿವೆ. ಏತನ್ಮಧ್ಯೆ, ಬಳಕೆದಾರರು ತಮ್ಮ ಸ್ಮಾರ್ಟ್‌ವಾಚ್‌ಗಳನ್ನು ಸಂಪರ್ಕಕ್ಕಾಗಿ ಕೂಡ ಬಳಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ಹಿಡಿದು ನೋಟಿಫಿಕೇಶನ್ ನೋಡುವುದರವರೆಗೆ, ಸಂದೇಶ ಕಳುಹಿಸುವುದು ಮತ್ತು ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳಿಗೆ ಕರೆ ಮಾಡುವುದಕ್ಕೆ ಜನ ಸ್ಮಾರ್ಟ್‌ವಾಚ್ ಬಳಸುತ್ತಿದ್ದಾರೆ. ತಾವು ಮುಂದಿನ ಬಾರಿ ಸ್ಮಾರ್ಟ್ ವಾಚ್ ಕೊಳ್ಳುವಾಗ ಆ್ಯಪಲ್ ತಮ್ಮ ಫೇವರಿಟ್ ಬ್ರ್ಯಾಂಡ್ ಆಗಿರಲಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ 77 ರಷ್ಟು ಜನ ಹೇಳಿದ್ದಾರೆ. ಮುಂದಿನ ಸ್ಮಾರ್ಟ್‌ವಾಚ್ ಖರೀದಿಸಲು 500 ಡಾಲರ್ ಅಥವಾ ಅದಕ್ಕೂ ಹೆಚ್ಚು ಖರ್ಚು ಮಾಡಲು ಸಿದ್ಧವಿರುವುದಾಗಿ ಕೂಡ ಬಹುತೇಕರು ಹೇಳಿದ್ದಾರೆ.
ಇದನ್ನೂ ಓದಿ : ಇಡೀ ಯುರೋಪ್ಗೆ ಅತ್ಯಧಿಕ ಸಂಸ್ಕರಿತ ತೈಲ ಪೂರೈಕೆದಾರನಾದ ಭಾರತ