ನವದೆಹಲಿ : ಭಾರತದಲ್ಲಿನ ಆಂಡ್ರಾಯ್ಡ್ ಬಳಕೆದಾರರಿಗಾಗಿ ಭೂಕಂಪದ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ಗೂಗಲ್ ಬುಧವಾರದಿಂದ ಜಾರಿಗೊಳಿಸಿದೆ. ಭೂಕಂಪವಾದಾಗ ಜನರು ಸುರಕ್ಷಿತವಾಗಿ ಹಾಗೂ ತ್ವರಿತವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ನೀಡುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಇದು ಆಂಡ್ರಾಯ್ಡ್ ಸ್ಮಾರ್ಟ್ಪೋನ್ ಬಳಕೆದಾರರಿಗೆ ಲಭ್ಯವಿರುತ್ತದೆ. ವಿಶ್ವದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಪೈಕಿ ಭೂಕಂಪಗಳ ಪಾಲು ದೊಡ್ಡದಾಗಿದೆ. ಭೂಕಂಪ ಸಂಭವಿಸಿದಾಗ ತಕ್ಷಣ ನೀಡುವ ಎಚ್ಚರಿಕೆಯು ಜನ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಾಗೂ ಇತರರನ್ನು ಕೂಡ ರಕ್ಷಿಸಲು ಬಹಳ ಉಪಯುಕ್ತವಾಗುತ್ತದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಮತ್ತು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಎಸ್ಸಿ) ಯೊಂದಿಗೆ ಸಮಾಲೋಚಿಸಿ ಈ ವ್ಯಸ್ಥೆಯನ್ನು ತಯಾರಿಸಲಾಗಿದೆ. ಈ ವ್ಯವಸ್ಥೆಯು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಅಳವಡಿಸಲಾದ ಸೆನ್ಸರ್ಗಳನ್ನು ಬಳಸಿಕೊಂಡು ಭೂಕಂಪಗಳನ್ನು ಪತ್ತೆ ಮಾಡುತ್ತದೆ ಮತ್ತು ಎಚ್ಚರಿಕೆ ನೀಡುತ್ತದೆ. ಪ್ರತಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಸಣ್ಣ ಅಕ್ಸೆಲೆರೋಮೀಟರ್ ಗಳನ್ನು ಹೊಂದಿದ್ದು, ಇದು ಮಿನಿ ಭೂಕಂಪ ಮಾಪಕವಾಗಿ ಕಾರ್ಯನಿರ್ವಹಿಸುತ್ತದೆ.
ವಿಶೇಷವಾಗಿ ಫೋನ್ ಅನ್ನು ಚಾರ್ಜಿಂಗ್ ಮಾಡಲು ಪ್ಲಗ್ಗೆ ಸಿಕ್ಕಿಸಿದ ಸಮಯದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳನ್ನು ಬಹುಬೇಗನೆ ಈ ವ್ಯವಸ್ಥೆ ಕಂಡುಹಿಡಿಯುತ್ತದೆ. ಭೂಕಂಪದ ವಿಚಾರದಲ್ಲಿ ಗೂಗಲ್ ಎರಡು ರೀತಿಯ ಎಚ್ಚರಿಕೆಗಳನ್ನು ನೀಡುತ್ತದೆ: ಜಾಗರೂಕರಾಗಿರಿ ಮತ್ತು ಕ್ರಮ ತೆಗೆದುಕೊಳ್ಳಿ (Be Aware and Take Action).
4.5 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪದ ಸಮಯದಲ್ಲಿ ಎಂಎಂಐ 3 ಮತ್ತು 4 ಕಂಪನದ ಸಮಯದಲ್ಲಿ ಬಳಕೆದಾರರಿಗೆ "ಜಾಗರೂಕರಾಗಿರಿ" (Be Aware) ಎಚ್ಚರಿಕೆಗಳನ್ನು ಕಳುಹಿಸಲಾಗುತ್ತದೆ. ಇದು ಪರದೆಯ ಮೇಲೆ ಅಲರ್ಟ್ ಮೆಸೇಜ್ ಅನ್ನು ತೋರಿಸುತ್ತದೆ. ಆದರೆ ನಿಮ್ಮ ಫೋನ್ ಡು ನಾಟ್ ಡಿಸ್ಟರ್ಬ್ ಅಥವಾ ಸೈಲೆಂಟ್ ಮೋಡ್ ನಲ್ಲಿದ್ದರೆ ಯಾವುದೇ ಸೌಂಡ್ ಅನ್ನು ಪ್ಲೇ ಮಾಡುವುದಿಲ್ಲ.
4.5 ತೀವ್ರತೆಯ ಭೂಕಂಪದ ಸಮಯದಲ್ಲಿ ಎಂಎಂಐ 5+ ಕಂಪನವನ್ನು ಅನುಭವಿಸುವ ಬಳಕೆದಾರರಿಗೆ ಅಲರ್ಟ್ ಎಚ್ಚರಿಕೆಗಳನ್ನು ಕಳುಹಿಸಲಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಪೋನ್ ಡು ನಾಟ್ ಡಿಸ್ಟರ್ಬ್ ಅಥವಾ ಸೈಲೆಂಟ್ ಮೋಡ್ನಲ್ಲಿದ್ದರೂ ಅದನ್ನು ಮೀರಿ ದೊಡ್ಡ ಮಟ್ಟದ ಸೌಂಡ್ ಅನ್ನು ಪ್ಲೇ ಮಾಡುತ್ತದೆ.
"ಅನೇಕ ಫೋನ್ಗಳು ಒಂದೇ ಸಮಯದಲ್ಲಿ ಭೂಕಂಪದ ಕಂಪನವನ್ನು ಕಂಡು ಹಿಡಿದರೆ ಅಂಥ ಸಮಯದಲ್ಲಿ ಭೂಕಂಪ ಸಂಭವಿಸಬಹುದು ಎಂದು ಅಂದಾಜು ಮಾಡಲು ನಮ್ಮ ಸರ್ವರ್ ಈ ಮಾಹಿತಿಯನ್ನು ಬಳಸಬಹುದು. ಜೊತೆಗೆ ಘಟನೆಯ ಗುಣಲಕ್ಷಣಗಳು - ಅದರ ಕೇಂದ್ರಬಿಂದು ಮತ್ತು ಪ್ರಮಾಣ ಮುಂತಾದುವುಗಳನ್ನು ವ್ಯವಸ್ಥೆ ಕಂಡು ಹಿಡಿಯುತ್ತದೆ. ನಂತರ ನಮ್ಮ ಸರ್ವರ್ ಹತ್ತಿರದ ಫೋನ್ಗಳಿಗೆ ಎಚ್ಚರಿಕೆಗಳನ್ನು ಕಳುಹಿಸಬಹುದು" ಎಂದು ಗೂಗಲ್ನ ಆಂಡ್ರಾಯ್ಡ್ ಸುರಕ್ಷತೆ ಉತ್ಪನ್ನ ವಿಭಾಗದ ವ್ಯವಸ್ಥಾಪಕ ಮೀಕಾ ಬರ್ಮನ್ ಬ್ಲಾಗ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ : ಬ್ಯಾಂಕ್ ಲಾಕರ್ನಲ್ಲಿನ 18 ಲಕ್ಷ ರೂ. ತಿಂದು ಹಾಕಿದ ಗೆದ್ದಲು; ಮಹಿಳೆ ಕಂಗಾಲು!