ನವದೆಹಲಿ : ಮೈಕ್ರೋಸಾಫ್ಟ್ ಒಡೆತನದ ಓಪನ್ ಎಐನ ಚಾಟ್‌ಜಿಪಿಟಿಯ ಯಶಸ್ಸಿನಿಂದ ಎಚ್ಚೆತ್ತ ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರು ಅದಕ್ಕಿಂತಲೂ ಹೆಚ್ಚು ಸಮರ್ಥವಾದ AI ವ್ಯವಸ್ಥೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಮತ್ತಷ್ಟು ಹೆಚ್ಚು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾದ AI ವ್ಯವಸ್ಥೆಗಳನ್ನು ನಿರ್ಮಿಸಲು ಕಂಪನಿಗೆ ಸಹಾಯ ಮಾಡುವುದಕ್ಕಾಗಿ ಹೊಸ ಘಟಕವನ್ನು ಕೂಡ ಅವರು ರಚಿಸಿದ್ದಾರೆ. ಗೂಗಲ್ ಡೀಪ್ ಮೈಂಡ್ (Google DeepMind) ಎಂದು ಕರೆಯಲ್ಪಡುವ ಈ ಗುಂಪು AI ಕ್ಷೇತ್ರದಲ್ಲಿನ ಎರಡು ಪ್ರಮುಖ ಸಂಶೋಧನಾ ಗುಂಪುಗಳಾದ ಗೂಗಲ್ ರಿಸರ್ಚ್ನ ಬ್ರೈನ್ ಟೀಮ್ ಮತ್ತು ಡೀಪ್ ಮೈಂಡ್ ಇವೆರಡನ್ನೂ ಒಗ್ಗೂಡಿಸಲಿದೆ.
ಕಳೆದ ದಶಕದ ಅವಧಿಯಲ್ಲಿ AI ನಲ್ಲಿ AlphaGo, Transformers, word2vec, WaveNet, ಆಲ್ಫಾಫೋಲ್ಡ್, ಸಿಕ್ವೆನ್ಸ್ ಟು ಸಿಕ್ವೆನ್ಸ್ ಮಾಡೆಲ್ಸ್, ಡಿಸ್ಟಿಲೇಶನ್, ಡೀಪ್ ರಿ ಇನ್ಫೋರ್ಸ್ಮೆಂಟ್ ಕಲಿಕೆ ಮತ್ತು ದೊಡ್ಡ ಪ್ರಮಾಣದ ಎಂಎಲ್ ಮಾದರಿಗಳನ್ನು ತಯಾರಿಸಲು, ತರಬೇತಿ ನೀಡಲು ಮತ್ತು ನಿಯೋಜಿಸಲು ಟೆನ್ಸಾರ್‌ಫ್ಲೋ ಮತ್ತು ಜಾಕ್ಸ್‌ನಂತಹ ವಿತರಣಾ ವ್ಯವಸ್ಥೆಗಳು ಮತ್ತು ಸಾಫ್ಟ್‌ವೇರ್ ಫ್ರೇಮ್‌ವರ್ಕ್‌ಗಳನ್ನು ತಯಾರಿಸಲಾಗಿದೆ ಎಂದು ಪಿಚೈ ಗುರುವಾರ ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಗೂಗಲ್ ಡೀಪ್‌ಮೈಂಡ್‌ನ CEO ಆಗಿರುವ ಡೆಮಿಸ್ ಹಸ್ಸಾಬಿಸ್ ಅವರು ಅತ್ಯಂತ ಸಮರ್ಥವಾಗಿ ಮತ್ತು ಜವಾಬ್ದಾರಿಯುತವಾಗಿ ಮುಂದಿನ ಪೀಳಿಗೆಯ ಗೂಗಲ್ ಉತ್ಪನ್ನಗಳು ಮತ್ತು ಸೇವೆಗಳಿಗೆ ಶಕ್ತಿ ತುಂಬಲು ಸಹಾಯ ಮಾಡುವ ಸಂಶೋಧನೆಗಾಗಿ ಜನರಲ್ ಯ AI ಸಿಸ್ಟಮ್‌ಗಳ ಅಭಿವೃದ್ಧಿಯನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಜೆಫ್ ಡೀನ್ ಅವರು ಗೂಗಲ್‌ನ ಮುಖ್ಯ ವಿಜ್ಞಾನಿಯ ಉನ್ನತ ಪಾತ್ರವನ್ನು ವಹಿಸಲಿದ್ದಾರೆ. ಅವರು ನನಗೆ ವರದಿ ಮಾಡುತ್ತಾರೆ. ಆ ಸಾಮರ್ಥ್ಯದಲ್ಲಿ ಅವರು ಗೂಗಲ್ ಸಂಶೋಧನೆ ಮತ್ತು ಗೂಗಲ್ ಡೀಪ್‌ಮೈಂಡ್‌ಗೆ ಮುಖ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಾರೆ ಎಂದು ಪಿಚೈ ಹೇಳಿದ್ದಾರೆ.
ಗೂಗಲ್ ಸರ್ಚ್, ಯೂಟ್ಯೂಬ್ ಮತ್ತು ಜಿಮೇಲ್‌ನಿಂದ ಪಿಕ್ಸೆಲ್ ಫೋನ್‌ಗಳಲ್ಲಿನ ಕ್ಯಾಮೆರಾದವರೆಗೆ ತನ್ನ ಹಲವು ಪ್ರಮುಖ ಉತ್ಪನ್ನಗಳನ್ನು ಸುಧಾರಿಸಲು ಗೂಗಲ್ AI ಅನ್ನು ಬಳಸಿದೆ. ಗೂಗಲ್ ಕ್ಲೌಡ್ ಮೂಲಕ AIನ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಾವು ವ್ಯಾಪಾರಗಳು ಮತ್ತು ಡೆವಲಪರ್‌ಗಳಿಗೆ ಸಹಾಯ ಮಾಡಿದ್ದೇವೆ. ಆರೋಗ್ಯ ಮತ್ತು ಹವಾಮಾನ ಬದಲಾವಣೆಯಂತಹ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ AIನ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ನಾವು ತೋರಿಸಿದ್ದೇವೆ ಎಂದು ಪಿಚೈ ಹೇಳಿದ್ದಾರೆ. AI ಚಾಲಿತ ಬಿಂಗ್ ಹುಡುಕಾಟ ಮತ್ತು ಚಾಟ್ಜಿಪಿಟಿಯೊಂದಿಗೆ ಮೈಕ್ರೋಸಾಫ್ಟ್ ಮುಂಚೂಣಿಯಲ್ಲಿರುವಂತೆ, ಗೂಗಲ್ ಮುಂದಿನ ತಿಂಗಳು ಹೊಸ AI ಚಾಲಿತ ಸರ್ಚ್ ಎಂಜಿನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.
ಮೈಕ್ರೋಸಾಫ್ಟ್‌ನ ಬಿಂಗ್ ಚಾಟ್‌ಬಾಟ್ ಮತ್ತು ಓಪನ್‌ಎಐನ ಚಾಟ್‌ಜಿಪಿಟಿಯಿಂದ ಎದುರಾಗುತ್ತಿರುವ ಪೈಪೋಟಿಯನ್ನು ಎದುರಿಸಲು ಗೂಗಲ್ ಎಲ್ಲ ಪ್ರಯತ್ನ ಮಾಡುತ್ತಿದೆ. ಬಾರ್ಡ್ ಎಂಬ ಗೂಗಲ್‌ನ ಚಾಟ್‌ಬಾಟ್ ಅನ್ನು ಮಾರ್ಚ್‌ನಲ್ಲಿ ಯುಎಸ್ ಮತ್ತು ಯುಕೆ ಯಲ್ಲಿ ಸೀಮಿತ ಸಂಖ್ಯೆಯ ಬಳಕೆದಾರರಿಗೆ ಬಿಡುಗಡೆ ಮಾಡಲಾಯಿತು. ಆದಾಗ್ಯೂ, ಚಾಟ್ಜಿಪಿಟಿ ಅಥವಾ ಜಿಪಿಟಿ-4 ನ ಜನಪ್ರಿಯತೆ ತಲುಪಲು ಬಾರ್ಡ್ ಇನ್ನೂ ಸಾಕಷ್ಟು ದೂರ ಸಾಗಬೇಕಿದೆ.
ಇದನ್ನೂ ಓದಿ : ಚುನಾವಣೆಗೆ ಹಣ ನೀಡದಿದ್ದರೆ ಗಂಭೀರ ಪರಿಣಾಮ: ಪಾಕ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎಚ್ಚರಿಕೆ