ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ನಿಮಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಮಟ್ಟಿನ ಜ್ಞಾನವಿದ್ದರೆ, ನಿಮಗೆ ಖಂಡಿತವಾಗಿಯೂ ಜಿಫ್ (GIF) ಫೋಟೋಗಳ ಬಗ್ಗೆ ಗೊತ್ತಿರುತ್ತದೆ. ಸಾಮಾನ್ಯವಾಗಿ ಈ ಜಿಫ್ ಇಮೇಜ್ಗಳನ್ನು ಬಳಸದವರೇ ಇಲ್ಲ ಎಂದು ಹೇಳಬಹುದು. ಈ ಜಿಫ್ ಸಂಶೋಧಕ ಸ್ಟೀಫನ್ ವಿಲ್ಹೈಟ್ (74) ಕೋವಿಡ್ ಸೋಂಕಿನ ಕಾರಣದಿಂದ ಹಿಂದಿನ ವಾರ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ಕ್ಯಾಥಲೀನ್ ಮಾಹಿತಿ ನೀಡಿದ್ದಾರೆ.
'ಸ್ಟೀಫನ್ ವಿಲ್ಹೈಟ್ ಮೃತಪಟ್ಟಾಗ ಅವರ ಕುಟುಂಬದವರು ಪಾರ್ಥಿವ ಶರೀರವನ್ನು ಸುತ್ತುವರೆದಿದ್ದರು. ಅವರಿಗೆ ಸಂತಾಪ ಸೂಚಿಸುವ ಪುಟದಲ್ಲಿ ವಿಲ್ಹೈಟ್ ಅವರು ಎಲ್ಲಾ ಸಾಧನೆಗಳ ಹೊರತಾಗಿಯೂ, ಅವರು ಅತ್ಯಂತ ವಿನಮ್ರ, ಕರುಣೆ ಮತ್ತು ಒಳ್ಳೆಯ ವ್ಯಕ್ತಿಯಾಗಿದ್ದರು ಎಂದು ಬರೆದಿತ್ತು' ಎಂದು ದಿ ವರ್ಜ್ ವರದಿ ಮಾಡಿದೆ. ಜಿಫ್ಗಾಗಿ ವಿಲ್ಹೈಟ್ ಅವರು ಸಾಕಷ್ಟು ಶ್ರಮವಹಿಸಿದ್ದು, 1980ರ ದಶಕದಲ್ಲಿ ಕಂಪ್ಯೂಸರ್ವ್(CompuServe) ಎಂಬ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದರು.
ಜಿಫ್ ಎಂದರೆ ಗ್ರಾಫಿಕ್ಸ್ ಇಂಟರ್‌ಚೇಂಜ್ ಫಾರ್ಮ್ಯಾಟ್ ಎಂಬ ವಿಸ್ತೃತ ರೂಪವಿದೆ. ಈಗ ಜಿಫ್ ಅನ್ನು ಪ್ರತಿಕ್ರಿಯೆ ನೀಡಲು, ಸಂದೇಶಗಳು ಚಿಕ್ಕದಾಗಿಸಲು ಮತ್ತು ಜೋಕ್‌ಗಳಿಗಾಗಿ ಬಳಸಲಾಗುತ್ತಿದೆ. ವಿಲ್ಹೈಟ್ ಅವರು ಜಿಫ್ಗಳನ್ನು ತಮ್ಮ ಮನೆಯಲ್ಲಿ ಕಂಡುಹಿಡಿದಿದ್ದರು ಎಂಬುದು ಮತ್ತೊಂದು ವಿಶೇಷ. ಆಗ ಕಂಪ್ಯೂಟರ್ ಅನಿಮೇಟೆಡ್ ಮೀಮ್ಗಳಿಗೆ ಜಿಫ್ಗಳು ಸ್ಪರ್ಧೆ ಒಡ್ಡುವಂತಿದ್ದವು. ಕಂಪ್ಯೂಸರ್ವ್ ಕಂಪನಿ ಜಿಫ್ಗಳಿಗೆ ಹೆಚ್ಚಿನ ಗುಣಮಟ್ಟದ ರೆಸ್ಯುಲ್ಯೂಷನ್ ನೀಡಿ, ಮತ್ತಷ್ಟು ಆಕರ್ಷಕಗೊಳಿಸಿತು.
ಜಿಫ್ ಇಂಗ್ಲಿಷ್ ಭಾಷೆಯಲ್ಲಿ Gif ಎಂಬುದಾಗಿದ್ದು, 'ಜಿಫ್' ಎಂದು ಉಚ್ಚರಿಸಬೇಕೋ ಅಥವಾ 'ಗಿಫ್' ಎಂದು ಉಚ್ಚರಿಸಬೇಕೋ? ಎಂಬ ಬಗ್ಗೆ ಚರ್ಚೆಗಳೂ ನಡೆದಿದ್ದವು. ಈ ಕುರಿತು 2013ರಲ್ಲಿ ನ್ಯೂಯಾರ್ಕ್ ಟೈಮ್ಸ್ಗೆ ಪ್ರತಿಕ್ರಿಯೆ ನೀಡಿದ್ದ ವಿಲ್ಹೈಟ್ ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ ಎರಡೂ ಉಚ್ಚಾರಣೆಗಳನ್ನು ಸ್ವೀಕರಿಸುತ್ತದೆ. ಆದರೆ ಗಿಫ್ ಎಂಬುದು ತಪ್ಪು, 'ಜಿಫ್' ಎಂದೇ ಉಚ್ಚಾರಣೆ ಮಾಡಬೇಕೆಂದು ಹೇಳಿದ್ದರು.
ಇದನ್ನೂ ಓದಿ: ಸ್ಯಾಮ್ಸಂಗ್ Galaxy M33 5G ಮೊಬೈಲ್: ಶೀಘ್ರದಲ್ಲೇ ದೇಶದ ಮಾರುಕಟ್ಟೆ ಪ್ರವೇಶ