ಕೆಲವೊಂದು ಕೀಟಗಳನ್ನು, ಹುಳಗಳನ್ನು ಅವುಗಳ ದೇಹ ರಚನೆಯ ವಿಶೇಷತೆಗಳಿಂದಾಗಿ ಗುರುತಿಸಲಾಗುತ್ತದೆ. ಆದರೆ, ಕೆಲವೊಮ್ಮೆ ದೇಹ ರಚನೆಯ ವಿಚಾರದಲ್ಲಿ ಕೂಡಾ ವೈಭವೀಕರಿಸಿ, ಹೆಸರುಗಳನ್ನು ಇಡಲಾಗಿದೆ. ಆದರೆ ಹೆಸರಿಗೆ ತಕ್ಕಂತೆ ಆ ಕೀಟಗಳು ಇರೋದಿಲ್ಲ.
ಹೌದು, ಶತಪದಿ (Centipedes) ಎಂದು ಕರೆಯುವ ಹುಳಕ್ಕೆ ನೂರು ಕಾಲು ಇರುತ್ತದೆ ಎಂದು ಹೆಸರು ಸೂಚಿಸುತ್ತದೆಯಾದರೂ, ಅದಕ್ಕೆ ನೂರು ಕಾಲು ಇರುವುದಿಲ್ಲ. ಹಾಗೆಯೇ ಸಹಸ್ರಪದಿ (Millipedes) ಎಂದು ಕರೆಯಲ್ಪಡುವ ಹುಳಕ್ಕೆ ಸಾವಿರ ಕಾಲು ಇರುವುದಿಲ್ಲ. ಆದರೆ, ಈಗ ನಿಜವಾದ ಸಹಸ್ರಪದಿಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅಂದರೆ ಈಗ ಪತ್ತೆಯಾಗಿರುವ ಸಹಸ್ರಪದಿಗೆ ಸಾವಿರಕ್ಕೂ ಹೆಚ್ಚು ಕಾಲುಗಳಿವೆ.
ವಿಜ್ಞಾನಿಗಳು ವಿಶ್ವದ ಮೊದಲ 1,306 ಕಾಲುಗಳುಳ್ಳ ಸಹಸ್ರಪದಿಯನ್ನು ಕಂಡು ಹಿಡಿದಿದ್ದಾರೆ. ಸಹಸ್ರಪದಿಯಲ್ಲಿ ಸುಮಾರು 13 ಸಾವಿರ ಪ್ರಭೇದಗಳಿವೆ. ಅವುಗಳಲ್ಲಿ ಕೆಲವುಗಳ ಕುರಿತು ಮಾತ್ರವೇ ಸಂಶೋಧನೆ ಮಾಡಲಾಗಿದ್ದು, ಇನ್ನೂ ಬಹುಪಾಲು ಸಹಸ್ರಪದಿಗಳ ಸಂಶೋಧನಾ ಕಾರ್ಯ ನಯಡೆಬೇಕಿದೆ.
ಎಮಿಲ್ಲಿಪೆಸ್ ಪೆರ್ಸಿಫೋನ್ ಜಾತಿಗೆ ಸೇರಿದ ಸಹಸ್ರಪದಿ
ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಸಾಕಷ್ಟು ಸಹಸ್ರಪದಿಗಳು ಕಾಣಸಿಗುತ್ತವೆ. ಆದರೆ, ಅವುಗಳಲ್ಲಿ 750ಕ್ಕಿಂತ ಹೆಚ್ಚು ಕಾಲುಗಳಿರುವ ಸಹಸ್ರಪದಿ ಈವರೆಗೂ ಪತ್ತೆಯಾಗಿರಲಿಲ್ಲ. ಆದರೆ, ಈಗ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯವೊಂದರ ತಜ್ಞರು 1,306 ಕಾಲುಗಳು ಉಳ್ಳ ಸಹಸ್ರಪದಿಯನ್ನು ಕಂಡು ಹಿಡಿದಿದ್ದಾರೆ.
ಆಸ್ಟ್ರೇಲಿಯಾದ ದಕ್ಷಿಣ ತೀರದಲ್ಲಿ ಭೂಮಿಯ 60 ಮೀಟರ್ ಆಳದಲ್ಲಿ ಈ ಹುಳ ಪತ್ತೆಯಾಗಿದ್ದು, ಇದು ಎಮಿಲ್ಲಿಪೆಸ್ ಪೆರ್ಸಿಫೋನ್ ಜಾತಿಗೆ ಸೇರಿದ ಸಹಸ್ರಪದಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಒಣ ಮತ್ತು ಒರಟಾದ ಭೂಮಿ ವಿಭಿನ್ನ ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಲಾರದು ಎಂದು ತಜ್ಞರು ಭಾವಿಸಿದ್ದಾರೆ. ಈವರೆಗೂ ಪತ್ತೆಯಾಗದ ಜೀವಿಗಳು ಬಂಡೆಗಳು ಅಥವಾ ಬಿರುಕುಗಳಲ್ಲಿ ಅಥವಾ ಭೂಮಿಯ ಒಳಗೆ ವಾಸ ಮಾಡುತ್ತವೆ. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಬೋರ್ವೆಲ್ನಲ್ಲಿ ಈ ಸಹಸ್ರಪದಿ ಪತ್ತೆಯಾಗಿದೆ.
ಇದನ್ನೂ ಓದಿ: ಶಾರ್ಕ್ ಪ್ರತಿಕಾಯಗಳಲ್ಲಿನ ಪ್ರೋಟೀನ್ನಿಂದ ಕೊರೊನಾಕ್ಕೆ ತಡೆ: ಸಂಶೋಧನೆ