ಹೈದರಾಬಾದ್: ಟ್ವಿಟರ್ ಸಿಇಒ ಆಗಿದ್ದ ಭಾರತೀಯ ಮೂಲದ ಪರಾಗ್ ಅಗರ್ವಾಲ್, ಮಸ್ಕ್ ಟ್ವಿಟರ್ (ಈಗಿನ ಎಕ್ಸ್) ಖರೀದಿ ಬಳಿಕ ಸಂಸ್ಥೆಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ಯಾವುದೇ ಸಂಸ್ಥೆಗೆ ಸೇರದ ಅಗರ್ವಾಲ್ ಸುದ್ದಿಯಲ್ಲಿರಲಿಲ್ಲ. ಇದೀಗ ಕೃತಕ ಬುದ್ಧಿಮತ್ತೆ (ಎಐ) ಜಗತ್ತಿಗೆ ಪ್ರವೇಶಿಸಿರುವ ಅವರು, ತಮ್ಮದೇ ಆದ ಸ್ಟಾರ್ಟ್ಅಪ್ವೊಂದನ್ನು ಆರಂಭಿಸಲು ಮುಂದಾಗಿದ್ದು, ಇದಕ್ಕಾಗಿ 30 ಮಿಲಿಯನ್ ಡಾಲರ್ನ್ನು ಹಣವನ್ನು ಸಂಗ್ರಹಿಸಿದ್ದಾರೆ.
ದಿ ಇನ್ಫಾರ್ಮೇಶನ್ ವರದಿ ಪ್ರಕಾರ, 2022ರಲ್ಲಿ ಮಸ್ಕ್ ಟ್ವಿಟರ್ ಪ್ರವೇಶದ ಬಳಿಕ ಸಂಸ್ಥೆಯಿಂದ ಹೊರ ನಡೆದಿದ್ದ ಅಗರ್ವಾಲ್ ಚಾಟ್ಜಿಪಿಟಿಯ ರೀತಿಯ ಎಐ ಸ್ಟಾರ್ಟ್ಅಪ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಅವರು 30 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದ್ದಾರೆ.
ಈ ಮೊದಲು ಓಪನ್ಎಐಗೆ ಬೆನ್ನೆಲುಬಾಗಿದ್ದ ಖೋಸ್ಲಾ ವೆಂಚರ್ಸ್ ಇದೀಗ ಅಗರ್ವಾಲ್ ಸ್ಟಾರ್ಟ್ ಅಪ್ಗೆ ಬಂಡವಾಳ ಹೂಡಿದೆ. ಇದರ ಜೊತೆಗೆ ಪ್ರಸಿದ್ಧ ಬಂಡಾವಳ ಘಟಕವಾಗಿರುವ ಇಂಡೆಕ್ಸ್ ವೆಂಚರ್ಸ್ ಮತ್ತು ಫಸ್ಟ್ ರೌಂಡ್ ಕ್ಯಾಪಿಟಲ್ ಕೂಡ ಇದಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಅಗರ್ವಾಲ್ ಉದ್ಯಮದ ಹೆಸರೇನು? ಉತ್ಪಾದನೆಯ ಮಾಹಿತಿ ಕುರಿತ ಯಾವುದೇ ವಿಚಾರ ಬಹಿರಂಗವಾಗಿಲ್ಲ. ಆದರೆ, ಅವರ ಬಲ್ಲ ಮೂಲಗಳು ತಿಳಿಸುವಂತೆ ಇದು ಓಪನ್ಎಐನ ಚಾಟ್ಬಾಟ್ ಚಾಟ್ಜಿಪಿಟಿಯಂತೆ ದೊಡ್ಡ ಭಾಷಾ ಮಾದರಿಯ (language models) ಸಾಫ್ಟ್ವೇರ್ ಅಭಿವೃದ್ಧಿ ನಿರ್ಮಾಣದ ಸಂಸ್ಥೆಯಾಗಿದೆ.
ಕಳೆದ ವರ್ಷ, ಮಸ್ಕ್ರ ಎಕ್ಸ್ ಕಾರ್ಪೋರೇಷನ್ನಿಂದ ಪರಾಗ್ ಅಗರ್ವಾಲ್ ಮತ್ತು ಮಾಜಿ ನೀತಿ ಮುಖ್ಯಸ್ಥರಾಗಿದ್ದ ವಿಜಯ್ ಗದ್ದೆ ಕಾನೂನು ಶುಲ್ಕವಾಗಿ 1.1 ಮಿಲಿಯನ್ ಹಣವನ್ನು ಗೆದ್ದಿದ್ದರು. ಮಸ್ಕ್ 44 ಬಿಲಿಯನ್ ಡಾಲರ್ ನೀಡಿ ಸಂಸ್ಥೆ ಒಡೆತನ ಪಡೆದ ಮೇಲೆ ಅಗರ್ವಾಲ್, ಗದ್ದೆ ಮತ್ತು ಟ್ವಿಟರ್ ಮಾಜಿ ಹಣಕಾಸು ಅಧಿಕಾರಿ ಮುಖ್ಯಸ್ಥ ನೆಡ್ ಸೆಗಲ್ಗೆ ತಮ್ಮ ಸಂಸ್ಥೆಯಿಂದ ವಜಾಗೊಳಿಸಿದ್ದಾಗಿ ತಿಳಿಸಿದ್ದರು.
ವರದಿಗಳ ಅನುಸಾರ, ಈ ಮೂವರು ಪ್ರಮುಖ ನಾಯಕರನ್ನು ಸಂಸ್ಥೆಯಿಂದ ಹೊರಗೆ ಕಳುಹಿಸಿದ್ದ ಟ್ವಿಟರ್ 90-100 ಮಿಲಿಯನ್ ಡಾಲರ್ ಎಕ್ಸಿಟ್ ಪ್ಯಾಕೇಜ್ ನೀಡಿತ್ತು. ಅಗರ್ವಾಲ್ 40 ಮಿಲಿಯನ್ ಡಾಲರ್ ಪಡೆದರು. ಐಐಟಿ ಬಾಂಬೆ ಮತ್ತು ಸ್ಟಾಂಡ್ಫೋರ್ಡ್ ವಿದ್ಯಾರ್ಥಿ ಅಗರ್ವಾಲ್ 2011ರಲ್ಲಿ ಟ್ವಿಟರ್ ಸೇರಿದ್ದರು. ಬಳಿಕ 2021ರಲ್ಲಿ ಟ್ವಿಟರ್ ಸಿಇಒ ಆಗಿ ನೇಮಕಗೊಂಡಿದ್ದರು.
ಇದನ್ನೂ ಓದಿ: ಇನ್ಸ್ಟಾ, ಫೇಸ್ಬುಕ್ನಲ್ಲಿ ಆತ್ಮಹತ್ಯೆ, ಅನಾರೋಗ್ಯಕರ ಮಾಹಿತಿ ಸಿಗದಂತೆ ನಿರ್ಬಂಧ: ಮೆಟಾ