ಬೆಂಗಳೂರು: ಡಿಸ್ನಿಯ ವೀಡಿಯೊ ಸ್ಟ್ರೀಮಿಂಗ್ ಆ್ಯಪ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಸೆಪ್ಟೆಂಬರ್ 30, 2023 ರಂದು ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 2.8 ಮಿಲಿಯನ್ (28 ಲಕ್ಷ) ಪಾವತಿಸಿದ ಚಂದಾದಾರರನ್ನು (ಪೇಡ್ ಸಬ್ಸ್ಕ್ರೈಬರ್ಗಳನ್ನು) ಕಳೆದುಕೊಂಡಿದೆ. ಅಲ್ಲಿಗೆ ಸತತ ನಾಲ್ಕನೇ ತ್ರೈಮಾಸಿಕದಲ್ಲಿ ಡಿಸ್ನಿ ಹಾಟ್ಸ್ಟಾರ್ ಚಂದಾದಾರರನ್ನು ಕಳೆದುಕೊಂಡಂತಾಗಿದೆ.
ಡಿಸ್ನಿ ಪ್ಲಸ್ ಹಾಟ್ಸ್ಟಾರ್ನ ಪಾವತಿಸಿ ಬಳಸುವ ಸದಸ್ಯರ ಸಂಖ್ಯೆ ತ್ರೈಮಾಸಿಕದಲ್ಲಿ 37.6 ಮಿಲಿಯನ್ಗೆ ಇಳಿದಿದೆ. ಇದು ಹಿಂದಿನ ತ್ರೈಮಾಸಿಕದಲ್ಲಿ ಇದ್ದ 40.4 ಮಿಲಿಯನ್ ಪಾವತಿಸಿದ ಸದಸ್ಯರ ಸಂಖ್ಯೆಗಿಂತ ಶೇಕಡಾ 7 ರಷ್ಟು ಕಡಿಮೆಯಾಗಿದೆ. ಡಿಸ್ನಿ ಅಕ್ಟೋಬರ್ ನಿಂದ ಸೆಪ್ಟೆಂಬರ್ ಅವಧಿಯ ಹಣಕಾಸು ವರ್ಷವನ್ನು ಅನುಸರಿಸುತ್ತದೆ. ಅಕ್ಟೋಬರ್ 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ 61.3 ಮಿಲಿಯನ್ ಚಂದಾದಾರರನ್ನು ಹೊಂದಿತ್ತು.
ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಆರಂಭಿಕ ಹಂತದಲ್ಲಿ ಐಪಿಎಲ್ ಸ್ಟ್ರೀಮಿಂಗ್ ಮತ್ತು ಪ್ರೀಮಿಯಂ ಎಚ್ಬಿಓ ಕಂಟೆಂಟ್ಗಳ ಕಾರಣದಿಂದ ಭಾರತದಲ್ಲಿ ಬಹುಬೇಗನೆ ಎತ್ತರಕ್ಕೆ ಬೆಳೆದಿತ್ತು. ಸದ್ಯ ಇವೆರಡೂ ಜನಪ್ರಿಯ ಕಂಟೆಂಟ್ನ ಹಕ್ಕುಗಳು ವಯಾಕಾಮ್ನ ಜಿಯೋ ಸಿನೆಮಾ ಬಳಿ ಇವೆ.
ಸಗಟು ಚಂದಾದಾರರ ಪ್ರಮಾಣ ಮತ್ತು ಹೆಚ್ಚಿನ ಜಾಹೀರಾತು ಆದಾಯದಿಂದಾಗಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಪ್ರತಿ ಪಾವತಿಸಿದ ಚಂದಾದಾರರಿಂದ ಗಳಿಸುವ ಸರಾಸರಿ ಮಾಸಿಕ ಆದಾಯವು ಹಿಂದಿನ ತ್ರೈಮಾಸಿಕದಲ್ಲಿ ಇದ್ದ 0.59 ರಿಂದ ಡಾಲರ್ನಿಂದ ಈ ತ್ರೈಮಾಸಿಕದಲ್ಲಿ 0.70 ಡಾಲರ್ಗೆ ಹೆಚ್ಚಾಗಿದೆ.
ನವೆಂಬರ್ 8 ರಂದು ಕಂಪನಿಯ ವಾರ್ಷಿಕ ವರದಿ ಪ್ರಕಟಿಸುವ ಸಂದರ್ಭದಲ್ಲಿ ಮಾತನಾಡಿದ ಡಿಸ್ನಿ ಸಿಇಒ ಬಾಬ್ ಐಗರ್, ಭಾರತದಲ್ಲಿ ತಮ್ಮ ಉದ್ಯಮಕ್ಕಿರುವ ಅವಕಾಶಗಳ ಬಗ್ಗೆ ಪರಿಶೀಲನೆ ಮಾಡುತ್ತಿರುವುದಾಗಿ ಹೇಳಿದರು. "ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಇದು ಚೀನಾ ನಂತರ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ನಾವು ಭಾರತದ ಮಾರುಕಟ್ಟೆಯಲ್ಲಿ ಉಳಿಯಲು ಬಯಸುತ್ತೇವೆ. ಆದರೆ ನಾವು ನಮ್ಮ ಪರಿಸ್ಥಿತಿಯನ್ನು ಹೇಗೆ ಬಲಪಡಿಸಬಹುದು ಮತ್ತು ತಳಮಟ್ಟದಿಂದ ಹೇಗೆ ಸುಧಾರಣೆ ತರಬಹುದು ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ" ಎಂದು ಐಗರ್ ಹೇಳಿದರು.
ಇತ್ತೀಚಿನ ತಿಂಗಳುಗಳಲ್ಲಿ, ಡಿಸ್ನಿ ತನ್ನ ಸ್ಟಾರ್ ಇಂಡಿಯಾ (ಈಗ ಡಿಸ್ನಿ ಸ್ಟಾರ್) ವ್ಯವಹಾರವನ್ನು ಮಾರಾಟ ಮಾಡಲು ಅಥವಾ ಬೇರೊಂದು ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಬಯಸುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಸ್ಟಾರ್ ಇಂಡಿಯಾ ವ್ಯವಹಾರವನ್ನು ಕಂಪನಿಯು 2019 ರಲ್ಲಿ ಟ್ವೆಂಟಿ ಫಸ್ಟ್ ಸೆಂಚುರಿ ಫಾಕ್ಸ್ ನಿಂದ 71.3 ಬಿಲಿಯನ್ ಡಾಲರ್ ನೀಡಿ ಖರೀದಿಸಿತ್ತು.
ಇದನ್ನೂ ಓದಿ: ಫೋನ್ ಹ್ಯಾಕ್ ಆಗಿದ್ರೆ ತಿಳಿಯುವುದು ಹೇಗೆ?: ಹ್ಯಾಕ್ ಆಗದಂತೆ ತಡೆಯುವುದು ಹೇಗೆ.. ಇಲ್ಲಿದೆ ಡೀಟೇಲ್ಸ್!