ಅಹಮದಾಬಾದ್ (ಗುಜರಾತ್): ಕೋವಿಡ್-19ನಿಂದಾಗಿ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಕಂಡುಬರುತ್ತಿದ್ದು, ಕೆಲವು ಜನರಲ್ಲಿ ಜ್ಞಾನದ ಕೊರತೆಯು ಶಿಲೀಂಧ್ರಗಳ ಸೋಂಕಿನ ಹರಡುವಿಕೆಗೆ ಕಾರಣವಾಗಿದೆ.
ಅನೇಕ ಸಂದರ್ಭಗಳಲ್ಲಿ, ಗೋ ಮೂತ್ರ, ಸಗಣಿ ಬಳಕೆಯು ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚಿಸಿದೆ. ಶಿಲೀಂಧ್ರಗಳ ಸೋಂಕಿನಿಂದಾಗಿ ಗುಜರಾತ್ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ ಇತ್ತೀಚೆಗೆ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿವೆ.
ಕೊರೊನಾ ವೈರಸ್ ಸೋಂಕಿನ ಚಿಕಿತ್ಸೆಯಾಗಿ ಅನೇಕ ಜನರು ಹಸುವಿನ ಸಗಣಿಗಳನ್ನು ಬಳಸುತ್ತಿದ್ದಾರೆ ಎಂಬುವುದು ಬೆಳಕಿಗೆ ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಅಹಮದಾಬಾದ್ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಮೋನಾ ದೇಸಾಯಿ, ಕೊರೊನಾಗೆ ಚಿಕಿತ್ಸೆಯಾಗಿ ದೇಹದ ಮೇಲೆ ಸಗಣಿ ಲೇಪಿಸುವುದರಿಂದ ಶಿಲೀಂಧ್ರಗಳ ಸೋಂಕು ಉಂಟಾಗುತ್ತದೆ ಮತ್ತು ಮ್ಯೂಕಾರ್ಮೈಕೋಸಿಸ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
"ಗೋ ಮೂತ್ರ ಹಾಗೂ ಸಗಣಿ ಅಪಾರ ಸಂಖ್ಯೆಯ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ. ಅದು ದೇಹಕ್ಕೆ ಪ್ರವೇಶಿಸಿದಾಗ ಯಾವುದೇ ಸಾಂಕ್ರಾಮಿಕ ರೋಗವನ್ನು ಹೆಚ್ಚು ತೀವ್ರಗೊಳಿಸುತ್ತದೆ. ಹಸುವಿನ ಸಗಣಿ ದೇಹಕ್ಕೆ ಹಚ್ಚುವುದರಿಂದ ಹಾಗೂ ಗೋ ಮೂತ್ರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಯಾವುದೇ ಸಂಶೋಧನೆ ಇಂದಲೂ ಸಾಬೀತಾಗಿಲ್ಲ. ಆದ್ದರಿಂದ, ಅಂತಹ ಚಿಕಿತ್ಸೆಯು ವಿಶ್ವಾಸಾರ್ಹವಲ್ಲ"ಎಂದು ಡಾ. ದೇಸಾಯಿ ಸ್ಪಷ್ಟಪಡಿಸಿದ್ದಾರೆ.