ಹೈದರಾಬಾದ್: ಇತ್ತೀಚೆಗೆ ಕಾರ್ನಿಯಾ ರೋಗವು ಕುರುಡುತನ ಮತ್ತು ದೃಷ್ಟಿಹೀನತೆಗೆ ಪ್ರಮುಖ ಕಾರಣವಾಗಿದೆ. ಆದರೆ, ಈ ಸಮಸ್ಯೆ ಹೋಗಲಾಡಿಸಬೇಕೆಂದರೆ ಕಾರ್ನಿಯಲ್ ದಾನಿಗಳ ಕೊರತೆ ಇದೆ. ಆದ್ರೆ ಐಐಟಿ ಹೈದರಾಬಾದ್ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಎಲ್‌ವಿ ಪ್ರಸಾದ್ ಕಣ್ಣಿನ ಆಸ್ಪತ್ರೆ ಮತ್ತು ಸಿಸಿಎಂಬಿ ಸಂಶೋದಕರು ಹೊಸ ಅನ್ವೇಷಣೆ ಮಾಡಿದ್ದಾರೆ. ದೃಷ್ಟಿ ಸಮಸ್ಯೆಗಳಿಗೆ ಕಾರ್ನಿಯಾ 3ಡಿ ಪ್ರಿಂಟಿಂಗ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಬಯೋ ಪ್ರಿಂಟಿಂಗ್ ಮೂಲಕ ಕಂಡು ಹಿಡಿದ ಕೃತಕ ಕಾರ್ನಿಯಾ
ಈ ವಿಧಾನದಿಂದ ಕಾರ್ನಿಯಾ ಚಿಕಿತ್ಸೆ ಬಳಿಕ ಉಂಟಾಗುವ ಕಣ್ಣಿನ ಭಾಗದ ಕಲೆಯನ್ನ ಈ ತಂತ್ರಜ್ಞಾನದಿಂದಾಗಿ ಸಂಪೂರ್ಣ ತಡೆಯಬಹುದು. ಇದೊಂದು ಬಯೋ ಪ್ರಿಂಟಿಂಗ್ ಮೂಲಕ ಕಂಡು ಹಿಡಿಯಲಾದ ಕೃತಕ ಕಾರ್ನಿಯಾ ಎನ್ನಲಾಗುತ್ತಿದೆ.
ಕಣ್ಣಿಗೆ ಯಾವುದೇ ಗಾಯ ಸಂಭವಿಸಿದಲ್ಲಿ ಅದು ಕಾರ್ನಿಯಲ್ ಹಾನಿ ಮತ್ತು ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು. ಕಾರ್ನಿಯಾವನ್ನು ಆ ಭಾಗಕ್ಕೆ ಉಂಟಾದ ಹಾನಿಯ ಅನುಗುಣವಾಗಿ ಸಂಪೂರ್ಣವಾಗಿ ಅಥವಾ ಭಾಗಶಃ ಕಸಿ ಮಾಡಬೇಕಾಗುತ್ತದೆ. ಇದಕ್ಕಾಗಿ ದಾನಿಯಿಂದ ಸಂಗ್ರಹಿಸಿದ ಕಾರ್ನಿಯಾವನ್ನು ಶಸ್ತ್ರಚಿಕಿತ್ಸೆ ಮೂಲಕ ರೋಗಿಗೆ ಅಳವಡಿಸಬೇಕು. ಇತ್ತೀಚಿನ ಸಂಶೋಧನೆಯೊಂದಿಗೆ ಕಾರ್ನಿಯಲ್ ಸಮಸ್ಯೆಯನ್ನು ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೇ ಪರಿಹರಿಸಬಹುದು.
ಸಂಶೋಧನೆಯಲ್ಲಿ ಇವರದ್ದೇ ಪ್ರಮುಖ ಪಾತ್ರ
ಐಐಟಿ ಹೈದರಾಬಾದ್‌ನ ಸಂಶೋಧಕ ಡಾ.ಫಾಲ್ಗುಣ ಪಾಟಿ, ಬಯೋ ಮೆಡಿಕಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರ ತಂಡ, ಎಲ್‌ವಿ ಪ್ರಸಾದ್ ಕಣ್ಣಿನ ಆಸ್ಪತ್ರೆಯ ಹಿರಿಯ ವಿಜ್ಞಾನಿ ವಿವೇಕ್ ಸಿಂಗ್ ಮತ್ತು ಸಿಸಿಎಂಬಿ ವಿಜ್ಞಾನಿ ಕಿರಣ್ ಕುಮಾರ್ ಈ ಆವಿಷ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮ್ಯಾಟ್ರಿಕ್ಸ್ ಹೈಡ್ರೋಜೆಲ್ ಹಾಗೂ ವ್ಯಕ್ತಿಯ ಕಣ್ಣಿನ ಭಾಗದಿಂದ ತೆಗೆಯಲ್ಪಟ್ಟ ಹೈಡ್ರೋಜೆಲ್ ಅನ್ನು ಕಾರ್ನಿಯಲ್ಗೆ ಗಾಯವಾದ ತಕ್ಷಣ ಹಚ್ಚಲಾಗುತ್ತದೆ. ಇದು ಕಾರ್ನಿಯಾ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಶಸ್ತ್ರಚಿಕಿತ್ಸೆ ಇಲ್ಲದೇ ಸರಿಪಡಿಸಬಹುದು
ಈ ಕಾರ್ನಿಯಾವನ್ನು 3ಡಿ ಪ್ರಿಂಟರ್ ಮೂಲಕ ತಯಾರಿಸಲಾಗುತ್ತದೆ. ಗಾಯಗೊಂಡ ಕಣ್ಣಿನಲ್ಲಿರುವ ಕಾರ್ನಿಯಾವನ್ನು 3ಡಿ ಪ್ರಿಂಟರ್ನಿಂದ ಮಾಡಿದ ಕಾರ್ನಿಯಾದಿಂದ ಶಸ್ತ್ರಚಿಕಿತ್ಸೆ ಇಲ್ಲದೆ ಸರಿಪಡಿಸಬಹುದು. ಈ ಕೃತಕ ಕಾರ್ನಿಯಾ ನೈಸರ್ಗಿಕ ಕಾರ್ನಿಯಾದ ಅಂಗಾಂಶಗಳನ್ನು ಬೆಳೆಯಲು ಸಹಾಯ ಮಾಡುತ್ತದೆ. ಈ ಆವಿಷ್ಕಾರವು ಸಾಮಾನ್ಯ ಕಾರ್ನಿಯಲ್ ಸಮಸ್ಯೆಗಳನ್ನು ಹಾಗೂ ಕೆರಾಟೋಕೊನಸ್ ಸಮಸ್ಯೆ ಪರಿಹರಿಸುತ್ತದೆ.
ಈ ವಿನೂತನ ಸಂಶೋಧನೆಯ ವಿವರಗಳನ್ನು ಹಲವಾರು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗಿದೆ. ಈ ಸಂಶೋಧನೆಗೆ ಗಾಂಧಿಯನ್ ಯುವ ತಂತ್ರಜ್ಞಾನ ಪ್ರಶಸ್ತಿಯೂ ಲಭಿಸಿದೆ. ಭಾರತ ಹಾಗೂ ಅಮೆರಿಕದಲ್ಲಿ ಪೇಟೆಂಟ್ ಹಕ್ಕುಗಳಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ
ಇದನ್ನೂ ಓದಿ: ಉತ್ತರ ಪ್ರದೇಶ ಸರ್ಕಾರದ ಯೋಜನೆಗೆ ಕಂಗನಾ ಬ್ರಾಂಡ್ ಅಂಬಾಸಿಡರ್