ನವದೆಹಲಿ: ಸ್ಯಾಮ್‌ಸಂಗ್ ಕಂಪನಿಯ ನಿತ್ಯ ಗೃಹ ಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟದಲ್ಲಿ ಶೇ.50 ರಷ್ಟು ಏರಿಕೆಯಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ಕಂಪನಿಯ ಒಟ್ಟಾರೆ ಬೆಳವಣಿಗೆ ಶೇ.32ಕ್ಕೆ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಸ್ತುತ ಹಬ್ಬದ ಅವಧಿಯಲ್ಲಿ ಸಣ್ಣ ಪಟ್ಟಣಗಳಿಂದ ಹಿಡಿದು ದೊಡ್ಡ ದೊಡ್ಡ ಸಿಟಿಗಳಲ್ಲಿಯೂ ಸಹ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ದಿನ ಬಳಕೆಯ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅತೀ ಹೆಚ್ಚು ಬೇಡಿಕೆ ಉಂಟಾಗಿತ್ತು ಎಂದು ಸ್ಯಾಮ್‌ಸಂಗ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಹೇಳಿದ್ದಾರೆ.
ಈ ತಿಂಗಳಿನಲ್ಲಿ ಸ್ಯಾಮ್ಸಂಗ್ ಕಂಪನಿಯು ಒಟ್ಟಾರೆ ಶೇ.36 ರಷ್ಟು ಬೆಳವಣಿಗೆ ಕಂಡಿದ್ದು, ಸಣ್ಣ ಶ್ರೇಣಿ ಮಾರುಕಟ್ಟೆಗಳಲ್ಲಿ ಪ್ರೀಮಿಯಂ ಉತ್ಪನ್ನಗಳ ಬೇಡಿಕೆ ಶೇ.68ರಷ್ಟು ಏರಿಕೆಯಾಗುವ ಮೂಲಕ ದಾಖಲೆ ಬರೆದಿದೆ ಎಂದು ಪುಲ್ಲನ್ ತಿಳಿಸಿದ್ದಾರೆ.
ದಕ್ಷಿಣ ಭಾರತದ ಓಣಂ ಹಬ್ಬದಿಂದ ಪ್ರಾರಂಭವಾಗಿ ದಸರಾ ಸೇರಿದಂತೆ ದೀಪಾವಳಿವರೆಗೆ ನಮ್ಮ ಕಂಪನಿಯ ಪ್ರಾಡಕ್ಟ್ಗಳಿಗೆ ಪ್ರತೀ ವರ್ಷವೂ ಬೇಡಿಕೆ ಇದೆ. ಅದರಂತೆ ಈ ವರ್ಷವೂ ಸಹ ಬೇಡಿಕೆ ಉಂಟಾಗಿದ್ದು, ಈ ಬಾರಿ ಉಳಿದೆಲ್ಲ ಉತ್ಪನ್ನಗಳಿಗಿಂತ ಗೃಹ ಬಳಕೆಯ ವಸ್ತುಗಳು ಹೆಚ್ಚಾಗಿ ಮಾರಾಟವಾಗಿದೆ.
ಅಕ್ಟೋಬರ್ ತಿಂಗಳೊಂದರಲ್ಲೇ, ಸ್ಯಾಮ್‌ಸಂಗ್ - 65 ಇಂಚಿನ ಟಿವಿ ವಿಭಾಗದಲ್ಲಿ ಶೇ.80 ಕ್ಕಿಂತ ಹೆಚ್ಚು ಹಾಗೂ ವಿವಿಧ ರೀತಿಯ ರೆಫ್ರಿಜರೇಟರ್‌ಗಳಲ್ಲಿ ಶೇ.75 ರಷ್ಟು ಉತ್ಪನ್ನಗಳು ಗ್ರಾಹಕರ ಕೈ ಸೇರಿದೆ. ಇನ್ನು, 7.5 ಕೆ.ಜಿ.ಗಿಂತ ಹೆಚ್ಚಿನ ಫ್ರಂಟ್ - ಲೋಡಿಂಗ್ ವಾಷಿಂಗ್ ಮೆಷಿನ್ ವಿಭಾಗದಲ್ಲಿನ ಮಾರಾಟವು ಕಂಪನಿಯ ನಿರೀಕ್ಷೆಗೂ ಮೀರಿತ್ತು. ಅದಲ್ಲದೇ, ನಮ್ಮಲ್ಲಿದ್ದ ದಾಸ್ತಾನು(ಸ್ಟಾಕ್) ಕೂಡ ಸದ್ಯಕ್ಕೆ ಖಾಲಿಯಾಗಿವೆ ಎಂದು ಪುಲ್ಲನ್ ಹೇಳಿದ್ದಾರೆ.
ದೊಡ್ಡ ಮಾರುಕಟ್ಟೆಗಳು ಮಾತ್ರವಲ್ಲದೇ, ಸಣ್ಣ ಮಾರುಕಟ್ಟೆಯಲ್ಲಿಯೂ ಸಹ ಸ್ಯಾಮ್‌ಸಂಗ್ ಅಲ್ಟ್ರಾ ಹೆಚ್.ಡಿ.ಟಿವಿ ವಿಭಾಗದಲ್ಲಿ ಶೇ.72 ಮತ್ತು ಕ್ಯೂಎಲ್‌ಇಡಿ ಟಿವಿಯಲ್ಲಿ ಶೇ.65ಕ್ಕಿಂತ ಹೆಚ್ಚಿನ ಮಾರಾಟದ ಬೆಳವಣಿಗೆಯನ್ನು ನಮ್ಮ ಕಂಪನಿ ಕಂಡಿದೆ ಎಂದು ಇದೇ ವೇಳೆ, ತಿಳಿಸಿದ್ದಾರೆ.