ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ನ ಮಾಜಿ ಸಿಇಒ ಸ್ಟೀವ್ ಬಾಲ್ಮರ್ 2024ರಲ್ಲಿ ಏನೂ ಮಾಡದೆಯೇ ಕಂಪನಿಯಿಂದ 1 ಬಿಲಿಯನ್ ಡಾಲರ್ (ಸುಮಾರು 8,323 ಕೋಟಿ ರೂ.) ಆದಾಯ ಪಡೆಯಲಿದ್ದಾರೆ. ಮೈಕ್ರೋಸಾಫ್ಟ್ ಕಂಪನಿ ಅವರಿಗೆ ವಾರ್ಷಿಕ ಲಾಭಾಂಶವಾಗಿ 2024ರಲ್ಲಿ 8323 ಕೋಟಿ ರೂ. ನೀಡಲಿದೆ. ಮೈಕ್ರೋಸಾಫ್ಟ್ ತನ್ನ ತ್ರೈಮಾಸಿಕ ಲಾಭಾಂಶವನ್ನು ಪ್ರತಿ ಷೇರಿಗೆ 75 ಸೆಂಟ್ಗಳಿಗೆ ಹೆಚ್ಚಿಸಿದ ನಂತರ ಬಾಲ್ಮರ್ ಈ ವರ್ಷ ಇಷ್ಟು ಮೊತ್ತ ಪಡೆಯಲಿದ್ದಾರೆ.
ಬಾಲ್ಮರ್ ಕಂಪನಿಯ ಸುಮಾರು 4 ಪ್ರತಿಶತದಷ್ಟು ಷೇರುಗಳನ್ನು ಹೊಂದಿದ್ದಾರೆ. ಇದು 333.2 ಮಿಲಿಯನ್ ಷೇರುಗಳಿಗೆ ಸಮಾನವಾಗಿದೆ. ಮೈಕ್ರೋಸಾಫ್ಟ್ನ ಷೇರು ಬೆಲೆಯಲ್ಲಿ ಶೇಕಡಾ 56 ರಷ್ಟು ಅಗಾಧ ಹೆಚ್ಚಳದಿಂದಾಗಿ ಬಾಲ್ಮರ್ ಅವರ ಬಳಿಯಿರುವ ಷೇರುಗಳ ಮೌಲ್ಯ ಸರಿಸುಮಾರು 130 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಇದೊಂದೇ ವರ್ಷದಲ್ಲಿ ಅವರ ಸಂಪತ್ತು 44 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ. ಅಕ್ಟೋಬರ್ನಲ್ಲಿ ಬಿಡುಗಡೆಯಾಗಿದ್ದ ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಬಾಲ್ಮರ್ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿ ಸ್ಥಾನ ಪಡೆದಿದ್ದರು.
ಬಾಲ್ಮರ್ 1980 ರಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರ ಸಹಾಯಕರಾಗಿ ಮೈಕ್ರೋಸಾಫ್ಟ್ ಸೇರಿದ್ದರು. ಆದಾಗ್ಯೂ ಅವರು ಪರ್ಸನಲ್ ಅಸಿಸ್ಟಂಟ್ಗಿಂತ ಹೆಚ್ಚಾಗಿ ಬಿಸಿನೆಸ್ ಮ್ಯಾನೇಜರ್ ಆಗಿದ್ದರು. 1980 ರಲ್ಲಿ ಕಂಪನಿಯ 30 ನೇ ಉದ್ಯೋಗಿಯಾಗಿ ಸೇರಿದ ಸ್ಟೀವ್ ಬಾಲ್ಮರ್ ಗಣನೀಯ ಷೇರುಗಳನ್ನು ಪಡೆದುಕೊಂಡರು. 2000 ರಲ್ಲಿ ಇವರು ಮೈಕ್ರೋಸಾಫ್ಟ್ನ ಸಿಇಒ ಆಗಿದ್ದರು ಮತ್ತು 2014 ರಲ್ಲಿ ಅಧಿಕಾರದಿಂದ ಕೆಳಗಿಳಿದರು. ಮೈಕ್ರೋಸಾಫ್ಟ್ ಈ ವರ್ಷ ಪ್ರತಿ ಷೇರಿಗೆ $ 2.79 ಲಾಭಾಂಶ ಘೋಷಿಸಿದೆ. ಇದರನ್ವಯ ಬಾಲ್ಮರ್ಗೆ ಅವರು ಹೊಂದಿರುವ ಷೇರುಗಳನ್ನು ಆಧರಿಸಿ ವಾರ್ಷಿಕ ಸುಮಾರು $ 930 ಮಿಲಿಯನ್ ಪಾವತಿಸಲಾಗಿದೆ.
ಮೈಕ್ರೋಸಾಫ್ಟ್ 18 ವರ್ಷಗಳಿಂದ ನಿರಂತರವಾಗಿ ತನ್ನ ಲಾಭಾಂಶವನ್ನು ಹೆಚ್ಚಿಸುತ್ತಿರುವುದರಿಂದ, ಬಾಲ್ಮರ್ ಅವರ ವಾರ್ಷಿಕ ಆದಾಯ 2024 ರಲ್ಲಿ 1 ಬಿಲಿಯನ್ ಡಾಲರ್ ಮೀರಬಹುದು ಮತ್ತು ಇನ್ನಷ್ಟು ಬೆಳೆಯುತ್ತಲೇ ಇರಲಿದೆ. ಆದಾಗ್ಯೂ, ವಾರ್ಷಿಕವಾಗಿ 5,00,000 ಡಾಲರ್ ಗಿಂತ ಹೆಚ್ಚಿನ ಆದಾಯ ಗಳಿಸುವ ವ್ಯಕ್ತಿಗಳಿಗೆ ಲಾಭಾಂಶದ ಮೇಲೆ 20% ತೆರಿಗೆ ವ್ಯಾಪ್ತಿಗೆ ಬಾಲ್ಮರ್ ಒಳಪಡುವ ಸಾಧ್ಯತೆಯಿದೆ. ಇದರರ್ಥ ಅವರು ಮೈಕ್ರೋಸಾಫ್ಟ್ನಿಂದ ಪಡೆದ ಲಾಭಾಂಶದ ಮೇಲೆ ಸುಮಾರು $ 200 ಮಿಲಿಯನ್ ತೆರಿಗೆ ಪಾವತಿಸಬೇಕಾಗಬಹುದು.
ಇದನ್ನೂ ಓದಿ : ಮಕ್ಕಳಿಂದ ಸೋಶಿಯಲ್ ಮೀಡಿಯಾಗೆ $11 ಬಿಲಿಯನ್ ಆದಾಯ