ನವದೆಹಲಿ: ಒಂದು ಸಾಧನದಲ್ಲಿ ಏಕಕಾಲಕ್ಕೆ ಎರಡು ವಾಟ್ಸ್ಆ್ಯಪ್ ಖಾತೆಗಳಿಗೆ ಲಾಗಿನ್ ಮಾಡುವ ವೈಶಿಷ್ಟ್ಯವನ್ನು ಮೆಟಾ ಒಡೆತನದ ತ್ವರಿತ ಸಂದೇಶ ಪ್ಲಾಟ್ಫಾರ್ಮ್ ವಾಟ್ಸ್ಆ್ಯಪ್ ಜಾರಿಗೊಳಿಸಲಿದೆ. ವಾಟ್ಸ್ಆ್ಯಪ್ ಬಳಕೆದಾರರು ಶೀಘ್ರದಲ್ಲೇ ಒಂದೇ ಸಮಯದಲ್ಲಿ ಎರಡು ವಾಟ್ಸ್ಆ್ಯಪ್ ಖಾತೆಗಳಿಗೆ ಲಾಗಿನ್ ಆಗಬಹುದು ಎಂದು ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
"ವಾಟ್ಸ್ಆ್ಯಪ್ನ ಎರಡು ಖಾತೆಗಳನ್ನು ಏಕಕಾಲಕ್ಕೆ ಬಳಸಬಹುದು. ಶೀಘ್ರದಲ್ಲೇ ನೀವು ಅಪ್ಲಿಕೇಶನ್ನಲ್ಲಿ ಒಂದೇ ಫೋನ್ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆಗಳನ್ನು ಹೊಂದಲು ಸಾಧ್ಯವಾಗುತ್ತದೆ" ಎಂದು ಅವರು ಘೋಷಿಸಿದರು. ಈ ವೈಶಿಷ್ಟ್ಯವು ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ.
"ಮತ್ತೊಂದು ಖಾತೆ ಬಳಸಲು ನೀವು ಇನ್ನು ಮುಂದೆ ಪ್ರತಿ ಬಾರಿ ಲಾಗ್ ಔಟ್ ಆಗಬೇಕಾಗಿಲ್ಲ, ಎರಡು ಫೋನ್ ಗಳನ್ನು ಒಯ್ಯಬೇಕಾಗಿಲ್ಲ ಅಥವಾ ತಪ್ಪು ಖಾತೆಯಿಂದ ಸಂದೇಶ ಕಳುಹಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ" ಎಂದು ಕಂಪನಿ ಹೇಳಿದೆ.
ಎರಡನೇ ಖಾತೆ ಲಾಗಿನ್ ಮಾಡಲು ಹೀಗೆ ಮಾಡಿ: ಎರಡನೇ ಖಾತೆಯನ್ನು ಲಾಗಿನ್ ಮಾಡಬೇಕಾದರೆ ನಿಮಗೆ ಎರಡನೇ ಫೋನ್ ಸಂಖ್ಯೆ ಮತ್ತು ಸಿಮ್ ಕಾರ್ಡ್ ಅಥವಾ ಮಲ್ಟಿ - ಸಿಮ್ ಅಥವಾ ಇ-ಸಿಮ್ ಬೆಂಬಲಿಸುವ ಫೋನ್ನ ಅಗತ್ಯವಿರುತ್ತದೆ. ಎರಡನೇ ಖಾತೆಗೆ ಲಾಗಿನ್ ಮಾಡಲು ನಿಮ್ಮ ವಾಟ್ಸ್ಆ್ಯಪ್ನಲ್ಲಿ ಸೆಟಿಂಗ್ಗೆ ಹೋಗಿ, ನಿಮ್ಮ ಹೆಸರಿನ ಪಕ್ಕದಲ್ಲಿರುವ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ ಮತ್ತು "Add account" ಕ್ಲಿಕ್ ಮಾಡಿ. ಕಂಪನಿಯ ಪ್ರಕಾರ, ಪ್ರತಿ ಖಾತೆಯಲ್ಲಿ ನಿಮ್ಮ ಗೌಪ್ಯತೆ ಮತ್ತು ನೋಟಿಫಿಕೇಶನ್ ಸೆಟ್ಟಿಂಗ್ಗಳನ್ನು ನಿಮಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು.
ನಕಲಿ ಆವೃತ್ತಿ ಡೌನ್ಲೋಡ್ ಮಾಡಬೇಡಿ: "ಅಧಿಕೃತ ವಾಟ್ಸ್ಆ್ಯಪ್ ಅನ್ನು ಮಾತ್ರ ಬಳಸಿ ಮತ್ತು ನಿಮ್ಮ ಫೋನ್ನಲ್ಲಿ ಹೆಚ್ಚುವರಿ ಖಾತೆಗಳಿಗೆ ಲಾಗಿನ್ ಮಾಡುವ ಸಲುವಾಗಿ ವಾಟ್ಸ್ಆ್ಯಪ್ನಂತೆ ಕಾಣುವ ನಕಲಿ ಆವೃತ್ತಿಗಳನ್ನು ಡೌನ್ಲೋಡ್ ಮಾಡಬೇಡಿ. ಅಧಿಕೃತ ವಾಟ್ಸ್ಆ್ಯಪ್ನಲ್ಲಿ ಮಾತ್ರ ನಿಮ್ಮ ಸಂದೇಶಗಳು ಸುರಕ್ಷಿತ ಮತ್ತು ಖಾಸಗಿಯಾಗಿರುತ್ತವೆ" ಎಂದು ಕಂಪನಿ ಗ್ರಾಹಕರಿಗೆ ಹೇಳಿದೆ.
ಈ ವಾರದ ಆರಂಭದಲ್ಲಿ, ವಾಟ್ಸ್ಆ್ಯಪ್ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಪಾಸ್ವರ್ಡ್ ರಹಿತ ಪಾಸ್ಕೀ ವೈಶಿಷ್ಟ್ಯವನ್ನು ಆರಂಭಿಸುವುದಾಗಿ ಘೋಷಿಸಿತ್ತು. ಪಾಸ್ಕೀ ವೈಶಿಷ್ಟ್ಯದ ಮೂಲಕ ಪ್ರತಿಬಾರಿ ಪಾಸ್ವರ್ಡ್ ಬಳಸುವ ಕಿರಿಕಿರಿ ತಪ್ಪಲಿದೆ. "ಆಂಡ್ರಾಯ್ಡ್ ಬಳಕೆದಾರರು ಸುಲಭವಾಗಿ ಮತ್ತು ಸುರಕ್ಷಿತವಾಗಿ ಪಾಸ್ ಕೀಗಳೊಂದಿಗೆ ಲಾಗ್ ಇನ್ ಮಾಡಬಹುದು. ನಿಮ್ಮ ಮುಖ, ಬೆರಳಚ್ಚು ಅಥವಾ ಪಿನ್ ಮಾತ್ರ ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಅನ್ಲಾಕ್ ಮಾಡುತ್ತದೆ" ಎಂದು ಕಂಪನಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ : ಅರ್ಧ ಶತಕೋಟಿ ಕಂಪ್ಯೂಟರ್ಗಳಲ್ಲಿ ಓಡುತ್ತಿದೆ ವಿಂಡೋಸ್ 11 ಓಎಸ್: ನಿರೀಕ್ಷೆ ಮೀರಿದ ಸಾಧನೆ