ನವದೆಹಲಿ: ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ನಡುವೆ ಭಾರತ ಸರ್ಕಾರವು ರಕ್ಷಣಾ ಬಜೆಟ್ ಅನ್ನು ಸುಮಾರು 70 ಸಾವಿರ ಕೋಟಿ ರೂಪಾಯಿಯಷ್ಟು ಹೆಚ್ಚಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದು 5.94 ಲಕ್ಷ ಕೋಟಿ ರೂ ಮೌಲ್ಯದ ರಕ್ಷಣಾ ಬಜೆಟ್ ಘೋಷಿಸಿದ್ದಾರೆ. ಇದು ಕಳೆದ ವರ್ಷದ ರಕ್ಷಣಾ ಬಜೆಟ್‌ಗಿಂತ ಶೇ.13ರಷ್ಟು ಹೆಚ್ಚು.
ಈ ಸಲದ ರಕ್ಷಣಾ ಬಜೆಟ್‌ನಲ್ಲಿ ಸರ್ಕಾರ ಹೊಸ ಶಸ್ತ್ರಾಸ್ತ್ರಗಳ ಖರೀದಿ, ಸಶಸ್ತ್ರ ಪಡೆಗಳ ಆಧುನೀಕರಣ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಮೂಲಸೌಕರ್ಯ ಮತ್ತು 'ಸ್ವಾವಲಂಬಿ ಭಾರತ'ಕ್ಕೆ ಹೆಚ್ಚಿನ ಒತ್ತು ನೀಡಿದೆ. ಕಳೆದ ಎರಡು ವರ್ಷಗಳಿಂದ ಪೂರ್ವ ಗಡಿಯಲ್ಲಿ ಚೀನಾದೊಂದಿಗೆ ಸಂಘರ್ಷಮಯ ವಾತಾವರಣ ಏರ್ಪಟ್ಟಿದ್ದು, ಸರ್ಕಾರ ಬಜೆಟ್ ವೆಚ್ಚ ಏರಿಸಿರುವುದು ಗಮನಾರ್ಹ.
ಕಳೆದ ರಕ್ಷಣಾ ಬಜೆಟ್: ಕೇಂದ್ರ ಸರ್ಕಾರವು 2022ರಲ್ಲಿ ರಕ್ಷಣಾ ಕ್ಷೇತ್ರಕ್ಕೆ 5.25 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಇದು ಸರ್ಕಾರದ ಒಟ್ಟು ಬಜೆಟ್‌ನ ಸುಮಾರು 13.31% ರಷ್ಟು ಮತ್ತು ದೇಶದ ಒಟ್ಟು GDP ಯ 2.9% ಆಗಿದೆ. ರಕ್ಷಣಾ ಬಜೆಟ್‌ನ ಅರ್ಧದಷ್ಟು ಹಣವನ್ನು ಸಂಬಳ ಮತ್ತು ಪಿಂಚಣಿಗಾಗಿ ಖರ್ಚು ಮಾಡಲಾಗಿದೆ. ಒಟ್ಟು ರಕ್ಷಣಾ ಬಜೆಟ್‌ನಲ್ಲಿ 1.63 ಲಕ್ಷ ಕೋಟಿ (31%) ವೇತನಕ್ಕೆ ಮತ್ತು 1.19 ಲಕ್ಷ ಕೋಟಿ (23%) ಪಿಂಚಣಿಗೆ ಹೋಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಉಪಕರಣಗಳ ಖರೀದಿಗೆ ಎಷ್ಟು?: ರಕ್ಷಣಾ ಉಪಕರಣಗಳ ಖರೀದಿಗೆ 1.52 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಇದು ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧನೌಕೆಗಳು ಮತ್ತು ಇತರ ಮಿಲಿಟರಿ ಉಪಕರಣಗಳ ಖರೀದಿ ಒಳಗೊಂಡಿದೆ. ಇದರಲ್ಲಿ ಭಾರತೀಯ ಸೇನೆಗೆ 32,015 ಕೋಟಿ ರೂ ನೀಡಲಾಗಿದೆ. ಭಾರತೀಯ ನೌಕಾಪಡೆಗೆ 47,590 ಕೋಟಿ ರೂ ಮತ್ತು ಭಾರತೀಯ ವಾಯುಪಡೆಗೆ 55,586 ಕೋಟಿ ರೂ ನೀಡಲಾಗಿತ್ತು.
'ಸ್ವಾವಲಂಬಿ ಭಾರತ'ವನ್ನು ಉತ್ತೇಜಿಸಲು ದೇಶೀಯ ಕಂಪನಿಗಳಿಂದ 68% ರಕ್ಷಣಾ ಸಾಧನಗಳನ್ನು ಖರೀದಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್&ಡಿ) 18,440 ಕೋಟಿ ರೂ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ವೆಚ್ಚಗಳಿಗಾಗಿ ಸುಮಾರು 38,714 ಕೋಟಿ ಮೀಸಲಿಡಲಾಗಿತ್ತು.
5 ವರ್ಷಗಳ ರಕ್ಷಣಾ ಬಜೆಟ್ ನೋಡೋಣ..:
2019- 4.31 ಲಕ್ಷ ಕೋಟಿ ರೂಪಾಯಿ
2020- 4.71 ಲಕ್ಷ ಕೋಟಿ
2021- 4.78 ಲಕ್ಷ ಕೋಟಿ
2022- 5.25 ಲಕ್ಷ ಕೋಟಿ
2023- 5.94 ಲಕ್ಷ ಕೋಟಿ
ರಾಜನಾಥ್ ಸಿಂಗ್ ಪ್ರತಿಕ್ರಿಯೆ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, "ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023ರ ಕೇಂದ್ರ ಬಜೆಟ್ ರೈತರು, ಮಹಿಳೆಯರು, ಹಿಂದುಳಿದ ವರ್ಗಗಳು ಮತ್ತು ಮಧ್ಯಮ ವರ್ಗದವರನ್ನು ಬೆಂಬಲಿಸುತ್ತದೆ. ಅವರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಒತ್ತು ನೀಡಿದೆ. ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ವಸತಿ, ಆರೋಗ್ಯ ರಕ್ಷಣೆ ಮತ್ತು ಉತ್ಪಾದನಾ ಕ್ಷೇತ್ರಗಳ ಮೇಲೆ ಹೆಚ್ಚಿದ ವೆಚ್ಚದೊಂದಿಗೆ, ಎಲ್ಲರಿಗೂ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೆಲವೇ ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗುರಿ ಸಾಧಿಸಲು ಸಹಕಾರಿಯಾಗುತ್ತದೆ" ಎಂದು ತಿಳಿಸಿದರು.
ಇದನ್ನೂ ಓದಿ: ಕೇಂದ್ರ ಬಜೆಟ್ 2023: ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂಪಾಯಿ