ಹೈದರಾಬಾದ್: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿನ ನದಿ ದಡದಲ್ಲಿ ಪ್ರವಾಹ ನಿಯಂತ್ರಣ ಕಾಮಗಾರಿಯನ್ನು ತಡೆಯುವ ನೇಪಾಳದ ನಿರ್ಧಾರವು ಭಾರತ-ನೇಪಾಳ ಸಂಬಂಧವನ್ನು ಇನ್ನಷ್ಟು ಹದಗೆಡಿಸಿದೆ. ಇದೇ ವೇಳೆಗೆ, ಚೀನಾದ ಜೊತೆಗೆ ತನ್ನ ಗಡಿಯನ್ನು ರಕ್ಷಿಸಿಕೊಳ್ಳಲು ಭಾರತ ತೀವ್ರ ಯತ್ನ ನಡೆಸುತ್ತಿದೆ.
ಎರಡು ದೇಶಗಳ ಮಧ್ಯೆ ಈ ತಿಂಗಳಲ್ಲಿ ಎರಡನೇ ಬಾರಿಗೆ ಗಡಿ ಸಮಸ್ಯೆ ಕಾಣಿಸಿಕೊಂಡಿದೆ. ಜೂನ್ 12 ರಂದು, ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ ಜನರ ಮೇಲೆ ನೇಪಾಳದ ಸೇನೆ ಗುಂಡಿನ ದಾಳಿ ನಡೆಸಿ ಭಾರತದ ನಾಗರಿಕರೊಬ್ಬರನ್ನು ಗಡಿಯಲ್ಲಿ ಹತ್ಯೆಗೈಯಲಾಗಿತ್ತು ಮತ್ತು ಇಬ್ಬರು ಗಾಯಗೊಂಡಿದ್ದರು. ಇದನ್ನು ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದರು. ಆದರೆ ಭಾನುವಾರದ ಬೆಳವಣಿಗೆ (ಜೂನ್ 21) ಉಭಯ ದೇಶಗಳ ಸಮಸ್ಯೆಯಾಗಿ ಕಾಣಿಸಿಕೊಂಡಿದೆ.
ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಎಂಬ ಮೂರು ಪ್ರದೇಶಗಳನ್ನು ಹೊಸ ರಾಜಕೀಯ ನಕ್ಷೆಯಲ್ಲಿ ನೇಪಾಳ ಸೇರಿಸುವ ನಿರ್ಧಾರದ ಜೊತೆಗೇ ಘಟಿಸಿದ ಇವು, ಎರಡೂ ದೇಶಗಳ ಮಧ್ಯೆ ಗಡಿ ಸಮಸ್ಯೆ ದೀರ್ಘಕಾಲದವರೆಗೆ ಮುಂದುರಿಯುವ ಲಕ್ಷಣವನ್ನು ಮೂಡಿಸಿವೆ.
2015 ರಲ್ಲಿ ಭಾರತವು ನೇಪಾಳದ ಮೇಲೆ ಹೇರಿದ ಆರ್ಥಿಕ ದಿಗ್ಬಂಧನವೇ ಇದಕ್ಕೆ ಕಾರಣ ಎಂದು ಭಾರತ-ನೇಪಾಳ ವಿಷಯದ ಪರಿಣಿತರು ಹೇಳುತ್ತಾರೆ. ಇದೇ ಸಮಯದಲ್ಲಿ ಭಾರತ-ನೇಪಾಳ ಸಂಬಂಧದಲ್ಲಿನ ಬಿರುಕನ್ನು ಬಳಸಿಕೊಳ್ಳಲು ಚೀನಾ ಕೂಡ ತನ್ನ ಪ್ರಭಾವವನ್ನು ಬೀರಿರಬಹುದು ಎಂದು ಅವರು ಊಹಿಸಿದ್ದಾರೆ.
“ಮೂರನೇ ವ್ಯಕ್ತಿಯ ಪ್ರಭಾವ ಎಂದಿಗೂ ಇದೆ. ಇತ್ತೀಚಿನ ವರ್ಷಗಳಲ್ಲಿ ನೇಪಾಳವು ಚೀನಾದ ಜೊತೆಗೆ ಸಂಬಂಧ ವೃದ್ಧಿ ಮಾಡಿಕೊಂಡಿರುವುದು, ನೇಪಾಳದ ನಾಯಕತ್ವದಲ್ಲಿ ಹಲವು ರೀತಿಯಲ್ಲಿ ಪ್ರೋತ್ಸಾಹವೂ ಸಿಕ್ಕಿರಬಹುದು” ಎಂದು ನೇಪಾಳ-ಭಾರತ ವಿಚಾರದಲ್ಲಿನ ಪರಿಣಿತ ಮತ್ತು ಮಾಜಿ ರಾಯಭಾರಿ ಎಸ್.ಡಿ ಮುನಿ ಹೇಳಿದ್ದಾರೆ.
ದೆಹಲಿಯಲ್ಲಿನ ಅಬ್ಸರ್ವರ್ ರೀಸರ್ಚ್ ಫೌಂಡೇಶನ್‌ನ ಹಿರಿಯ ಪರಿಣಿತ ಕೆ ಯ್ಹೋಮ್ ಪ್ರಕಾರ, ಭಾರತ ಮತ್ತು ನೇಪಾಳದ ಮಧ್ಯೆ ಕಾಲಾಪಾನಿ ವಿಷಯ ದೀರ್ಘಕಾಲದಿಂದಲೂ ಇದೆ. ಇದನ್ನು ಚರ್ಚೆಯ ಮೂಲಕ ಪರಿಹರಿಸಬಹುದಾಗಿತ್ತು.
“ಈ ಸಮಸ್ಯೆ ಕಾಳಿ ನದಿ ಹರಿಯುವ ಮೂಲದ ಕುರಿತು ಶುರುವಾಗಿದೆ. ಭಾರತ ಒಂದು ರೀತಿಯಲ್ಲಿ ಇದನ್ನು ವ್ಯಾಖ್ಯಾನಿಸುತ್ತದೆ ಮತ್ತು ನೇಪಾಳ ಇನ್ನೊಂದು ರೀತಿ ವ್ಯಾಖ್ಯಾನಿಸುತ್ತಿದೆ” ಎಂದು ಈಟಿವಿ ಭಾರತ್‌ಗೆ ಕೆ ಯ್ಹೋಮ್ ಹೇಳಿದ್ದಾರೆ.
“ಗಡಿ ವಿವಾದಗಳು ಮತ್ತು ಭೌಗೋಳಿಕ ಸಮಸ್ಯೆಗಳು ಭಾವನಾತ್ಮಕ ಸಮಸ್ಯೆಗಳೂ ಹೌದು. ಎರಡೂ ದೇಶಗಳೂ ಇದನ್ನು ಪರಿಹರಿಸಲು ಸಾಧ್ಯವಾಗಿಲ್ಲ” ಎಂದು ಅವರು ಹೇಳಿದ್ದಾರೆ.
ಈ ಸಮಸ್ಯೆಯನ್ನು ನೇಪಾಳ ಇದೇ ಮೊದಲ ಬಾರಿಗೆ ಪ್ರಸ್ತಾಪಿಸಿದ್ದಲ್ಲ. 2015 ರಲ್ಲೂ ಕೂಡ, ಭಾರತ ಮತ್ತು ಚೀನಾ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಲಿಪು ಲೇಖ್ ಪಾಸ್ ಅನ್ನು ಸೇರಿಸಿದ್ದಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿತ್ತು.
ನಾಥುಲಾ, ಖಿಯಾಂಗ್ಲಾ/ಲಿಪು ಲೇಖ್ ಪಾಸ್ ಮತ್ತು ಶಿಪ್ಕಿ ಲಾ ಮೂಲಕ ಗಡಿ ವ್ಯವಹಾರವನ್ನು ವೃದ್ಧಿಸಲು ಮತ್ತು ವಹಿವಾಟು ನಡೆಸುವ ಸಾಮಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಎರಡೂ ದೇಶಗಳು ಮಾತುಕತೆ ನಡೆಸಿವೆ” ಎಂದು 2015 ಮೇ 15 ರಂದು ಭಾರತ ಮತ್ತು ಚೀನಾ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಇದೊಂದು ಹಳೆಯ ಸಮಸ್ಯೆ ಎಂಬುದನ್ನು ಪ್ರೊಫೆಸರ್ ಎಸ್‌ಡಿ ಮುನಿ ತಿರಸ್ಕರಿಸುತ್ತಾರೆ. 1954 ರಲ್ಲಿ ಭಾರತ ಮತ್ತು ಚೀನಾ ಸಹಿ ಮಾಡಿದ ಪಂಚಶೀಲ ಒಪ್ಪಂದದಲ್ಲಿ ಲಿಪು ಲೇಖ್ ಪಾಸ್ ಸೇರಿಸಿದ್ದಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.
2015 ರಲ್ಲಿ ಲಿಪುಲೇಖ್ ಭಾರತದ ಭಾಗ ಎಂದು ಚೀನಾ ಒಪ್ಪಿಕೊಂಡಿದೆ. ಅಷ್ಟೇ ಅಲ್ಲ, 1954 ರಲ್ಲಿ ಶಾಂತಿ ಸಹಬಾಳ್ವೆ ಕರಾರನ್ನು ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಭಾರತ ಮತ್ತು ಚೀನಾ ವ್ಯಾಪಾರ ವಹಿವಾಟು ನಡೆಸುವುದಕ್ಕಾಗಿ 8-9 ಮಾರ್ಗಗಳನ್ನು ನಮೂದಿಸಲಾಗಿತ್ತು” ಎಂದು ಪ್ರೊಫೆಸರ್ ಎಸ್.ಡಿ ಮುನಿ ಹೇಳಿದ್ದಾರೆ.
“2015 ರಲ್ಲಿ ಚೀನೀಯರು ತಮ್ಮ ನಿಲುವನ್ನು ಪುನಃ ಖಚಿತಪಡಿಸಿದ್ದಾರೆ. ಆದರೆ ನೇಪಾಳದ ನೀತಿಯಲ್ಲಿ ಬದಲಾಗಿದೆ. ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ” ಎಂದು ಪ್ರೊ. ಮುನಿ ಗಮನಿಸಿದ್ದಾರೆ.
ಆದರೆ, ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಸೇನೆಯು ಉದ್ವಿಗ್ನ ಪರಿಸ್ಥಿತಿಯಲ್ಲಿರುವಾಗ ಭಾರತದ ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಧುರಾವನ್ನು ತನ್ನ ದೇಶದ ರಾಜಕೀಯ ನಕ್ಷೆಯಲ್ಲಿ ಅತ್ಯಂತ ಕ್ಷಿಪ್ರವಾಗಿ ಸೇರಿಸಲು ಹೊರಟ ನೇಪಾಳಕ್ಕೆ ಇರುವ ಬಾಹ್ಯ ಪ್ರಭಾವದ ಬಗ್ಗೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಕಳೆದ ವಾರ, ಗಲ್ವನ್ ಕಣಿವೆಯಲ್ಲಿ ಚೀನಾ ಸೇನೆಯ ಜೊತೆಗಿನ ಕಾದಾಟದಲ್ಲಿ 20 ಭಾರತೀಯ ಯೋಧರು ಸಾವನ್ನಪ್ಪಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.
ನೇಪಾಳ ಒಪ್ಪಿಕೊಂಡಿರುವ ಹೊಸ ನಕ್ಷೆಯ ಹಿಂದೆ ಚೀನಾ ಹಸ್ತಕ್ಷೇಪ ಇದೆಯೇ?
ಮೇ 8 ರಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ 80 ಕಿ.ಮೀ ಉದ್ದದ ರಸ್ತೆಯನ್ನು ಉದ್ಘಾಟಿಸಿದ್ದಾರೆ. ಈ ರಸ್ತೆಯು ಭಾರತ, ಚೀನಾ ಮತ್ತು ನೇಪಾಳದ ಮೂರೂ ದೇಶಗಳ ಗಡಿಯಲ್ಲಿನ ವಾಸ್ತವ ಗಡಿ ರೇಖೆಯಿಂದ ಉತ್ತರಾಖಂಡಕ್ಕಕೆ ಸಂಪರ್ಕಿಸುವ ರಸ್ತೆಯಾಗಿದೆ. ಈ ರಸ್ತೆಯಿಂದಾಗಿ ಕೈಲಾಸ ಮಾನಸ ಸರೋವರಕ್ಕೆ ತೆರವು ಭಕ್ತರಿಗೆ ಅನುಕೂಲವಾಗಲಿದೆ ಮತ್ತು ಭಕ್ತರು ಲಿಪುಲೇಖ್ ಪಾಸ್‌ಗೆ ನೇರವಾಗಿ ಈ ರಸ್ತೆಯ ಮೂಲಕ ಸಾಗಬಹುದಾಗಿದೆ.
ಈ ರಸ್ತೆ ವ್ಯೂಹಾತ್ಮಕವಾಗಿಯೂ ಪ್ರಮುಖವಾಗಿದ್ದು, ಭಾರತದ ಕಡೆಯಿಂದ ಸಂಪರ್ಕ ವೃದ್ಧಿಯಾಗುತ್ತದೆ. ಇದರಿಂದ ಚೀನಾ ಜೊತೆಗಿನ ಕದನದಲ್ಲಿ ಸೇನೆ ಸುಲಭವಾಗಿ ಸಾಗಲು ಅನುಕೂಲವೂ ಆಗಲಿದೆ.
ಮೇ 5 ರಂದು ಲಡಾಖ್ ವಲಯದಲ್ಲಿ ಭಾರತ ಮತ್ತು ಚೀನಾ ಯೋಧರ ಮಧ್ಯೆ ಮೊದಲ ಬಾರಿಗೆ ಕಾದಾಟ ನಡೆದ ಮೂರು ದಿನಗಳ ನಂತರ ಈ ರಸ್ತೆ ಉದ್ಘಾಟನೆ ಮಾಡಲಾಯಿತು.
ಆದರೆ, ಈ ರಸ್ತೆಯನ್ನು ಉದ್ಘಾಟನೆ ಮಾಡಿದ ಮರುದಿನ ಮೇ 8 ರಂದು, ನೇಪಾಳವು ಭಾರತಕ್ಕೆ ಪ್ರತಿಭಟಿಸಿ ಪತ್ರ ಬರೆದಿದೆ. ಇದು ಎರಡೂ ದೇಶಗಳ ಮಧ್ಯೆ ಈ ಕುರಿತು ಇದ್ದ ಒಪ್ಪಂದವನ್ನು ಒಪ್ಪುವುದಿಲ್ಲ ಎಂದಿತು.
“ನೇಪಾಳದ ಪ್ರದೇಶದ ಮೂಲಕ ಲಿಪುಲೇಖ್ ಅನ್ನು ಸಂಪರ್ಕಿಸುವ ಲಿಂಕ್ ರೋಡ್ ಅನ್ನು ಭಾರತ ನಿನ್ನೆ ಉದ್ಘಾಟನೆ ಮಾಡಿರುವುದನ್ನು ನೇಪಾಳ ಸರ್ಕಾರ ಖಂಡಿಸುತ್ತದೆ” ಎಂದು ನೇಪಾಳ ಸರ್ಕಾರ ಮೇ 8 ರಂದು ಪ್ರಕಟಣೆಯನ್ನು ಹೊರಡಿಸಿತು.
ನೇಪಾಳದ ಈ ಪ್ರತಿಕ್ರಿಯೆ ಹಲವರನ್ನು ಅಚ್ಚರಿಗೆ ದೂಡಿತು. ಯಾಕೆಂದರೆ ಈ ರಸ್ತೆಯನ್ನು 2005 ರಲ್ಲಿ 81 ಕೋಟಿ ರೂ. ವೆಚ್ಚದಲ್ಲಿ ಅನುಮೋದಿಸಲಾಗಿತ್ತು. 2018 ರಲ್ಲಿ ಇದರ ವೆಚ್ಚ 439 ಕೋಟಿ ರೂ.ಗೆ ಏರಿಕೆ ಕಂಡಿತ್ತು. ರಸ್ತೆಯನ್ನು ಈ ವರ್ಷದ ಏಪ್ರಿಲ್ 17 ರಂದು ಮುಗಿಸಿ, ಮೇಯಲ್ಲಿ ವಿಳಂಬವಾಗಿ ಉದ್ಘಾಟನೆ ಮಾಡಲಾಗಿತ್ತು.
ಇದೇ ಕಾರಣಕ್ಕೆ ನೇಪಾಳದ ಪ್ರತಿಕ್ರಿಯೆಯ ಹಿಂದೆ ಚೀನಾದ ಪ್ರಭಾವ ಇದೆ ಎಂದು ಚೀನಾದ ಹೆಸರು ಹೇಳದೆಯೇ ಭಾರತದ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಹೇಳಿದ್ದರು.
“ನಾವು ಕಾಳಿ ನದಿಯ ಪಶ್ಚಿಮಕ್ಕೆ ರಸ್ತೆ ನಿರ್ಮಾಣ ಮಾಡಿದ್ದೇವೆ. ನೇಪಾಳವು ಕಾಳಿ ನದಿಯ ಪೂರ್ವಭಾಗವು ತಮ್ಮ ವ್ಯಾಪ್ತಿ ಎಂಬುದನ್ನು ಒಪ್ಪಿಕೊಂಡಿದೆ. ಈ ಮೂರು ದೇಶಗಳ ಗಡಿಯ ಬಗ್ಗೆ ಯಾವತ್ತೂ ವಿವಾದ ಇರಲಿಲ್ಲ” ಎಂದು ಮೇ 15 ರಂದು ಜನರಲ್ ಎಂಎಂ ನರವಾಣೆ ಹೇಳಿದ್ದಾರೆ.
“ಯಾರೋ ಇತರರ ಪ್ರಭಾವದಿಮದ ನೇಪಾಳ ಈ ವಿಷಯವನ್ನು ಪ್ರಸ್ತಾಪಿಸಿದೆ ಎಂದು ಭಾವಿಸುವುದಕ್ಕೆ ಹಲವು ಕಾರಣಗಳಿವೆ. ಹಾಗೂ ಇದಕ್ಕೆ ಹಲವು ಸಾಧ್ಯತೆಗಳೂ ಇವೆ” ಎಂದ ಜನರಲ್ ನರವಾಣೆ ಹೇಳಿದ್ದಾರೆ.
ಭಾರತ ಮತ್ತು ಚೀನಾ ಮಧ್ಯೆ ಪರಿಸ್ಥಿತಿ ಉದ್ವಿಗ್ನವಾಗಿರುವಾಗಲೇ, ಮೇ 18 ರಂದು ನೇಪಾಳ ಸಂಪುಟವು, ಭಾರತದ ತೀಕ್ಷ್ಣ ಆಕ್ಷೇಪದ ಮಧ್ಯೆಯೂ ರಾಜಕೀಯ ನಕ್ಷೆಯನ್ನು ಬದಲಿಸುವ ಪ್ರಸ್ತಾವನೆಗೆ ಸಮ್ಮತಿ ನೀಡಿದೆ.
ಕಳೆದ ವಾರ, ನೇಪಾಳದ ಎರಡೂ ಸದನಗಳು ಅವಿರೋಧವಾಗಿ, ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಧುರಾವನ್ನು ತಮ್ಮ ದೇಶದ ಭಾಗವನ್ನಾಗಿ ತೋರಿಸುವ ರಾಜಕೀಯ ನಕ್ಷೆಗೆ ಅನುಮೋದನೆ ನೀಡಿವೆ.
ನೇಪಾಳದ ಈ ಕ್ರಮವು ‘ಕೃತಕವಾಗಿ ಭೂಭಾಗ ವಿಸ್ತರಣೆ’ಯ ಪ್ರಯತ್ನವಾಗಿದೆ ಎಂದು ಭಾರತವು ಈಗಾಗಲೇ ಇದಕ್ಕೆ ಆಕ್ಷೇಪಿಸಿದೆ.
ಆದರೆ, ಹೊಸ ನಕ್ಷೆಯನ್ನು ಜಾರಿಗೊಳಿಸುವದರಲ್ಲೇ ಸಮಸ್ಯೆ ಮುಗಿದಿಲ್ಲ. ಗಡಿ ವಿವಾದವನ್ನು ಹೊಸ ಪ್ರದೇಶಗಳಿಗೂ ವಿಸ್ತರಿಸುವ ಪ್ರಯತ್ನವನ್ನೂ ನೇಪಾಳ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆಗಳು ಸಾಬೀತು ಮಾಡಿವೆ.
ಬಿಹಾರದ ಪೂರ್ವ ಚಂಪಾರಣ ಜಿಲ್ಲೆಯ ಲಾಲ್‌ಬಕೆಯಾ ನದಿಯಲ್ಲಿ ಭಾರತೀಯ ಅಧಿಕಾರಿಗಳು ನಡೆಸಿದ ಪ್ರವಾಹ ನಿಯಂತ್ರಣ ಕ್ರಮಗಳನ್ನು ಈ ಭಾನುವಾರ ನೇಪಾಳದ ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳು ತಡೆದಿದ್ದಾರೆ. ಜೂನ್ 12 ರಂದು ಓರ್ವ ಭಾರತೀಯನನ್ನು ಹತ್ಯೆಗೈದು ಇಬ್ಬರು ಗಾಯಗೊಂಡ ಹಿನ್ನೆಲೆಯಲ್ಲೇ ಈ ಘಟನೆಯೂ ನಡೆದಿದೆ.
ಲಾಲ್‌ಬಕೆಯಾ ನದಿಯು ನೇಪಾಳದಲ್ಲಿ ಹುಟ್ಟುತ್ತದೆ ಮತ್ತು ಬಿಹಾರದ ಸೀತಾಮಢಿ ಜಿಲ್ಲೆಯಲ್ಲಿನ ಬಾಗ್ಮತಿ ನದಿಗೆ ಸೇರುತ್ತದೆ. ನೇಪಾಳದಿಂದ ಭಾರತಕ್ಕೆ ಹರಿಯುವ ಈ ನದಿಯಲ್ಲಿ ಪ್ರವಾಹ ಉಂಟಾಗುವುದರಿಂದಾಗಿ ಬಿಹಾರ ಹಿಂದಿನಿಂದಲೂ ತೀವ್ರ ಪರಿಣಾಮವನ್ನು ಎದುರಿಸುತ್ತಿದೆ,
ಈ ನದಿಯಲ್ಲಿ ಹಲವು ಒಡ್ಡುಗಳನ್ನು ನಿರ್ಮಿಸಿದೆ ಮತ್ತು ಪ್ರತಿ ವರ್ಷವೂ ಇವುಗಳನ್ನು ಮಳೆಗಾಲಕ್ಕೂ ಮುನ್ನ ಒಡೆಯಲಾಗುತ್ತದೆ. ಆದರೆ, ಈ ವರ್ಷ ನೇಪಾಳದ ಅಧಿಕಾರಿಗಳು ಇದನ್ನು ತಡೆದಿದ್ದಾರೆ.
ಕೃಷ್ಣಾನಂದ ತ್ರಿಪಾಠಿ, ಈಟಿವಿ ಭಾರತ