ಕೊಲಂಬೋ: ಶ್ರೀಲಂಕಾ ಸಂಸದೀಯ ಚುನಾವಣೆ ಆಗಸ್ಟ್ 5ರಂದು ನಡೆಯಲಿದೆ. ದೇಶದ ಮತದಾರರು, ಹೊಸ ಸಂಸತ್ ಅನ್ನು ಈ ಮತದಾನದ ಮೂಲಕ ಆಯ್ಕೆ ಮಾಡಲಿದ್ದಾರೆ. ಈ ನಡುವೆ, ಕೊಲಂಬೋದ ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ, ಶ್ರೀಲಂಕಾದ ಈಗಿನ ಸರ್ಕಾರವು ಅತ್ಯಂತ ಬಲಿಷ್ಠ, ನಿರ್ಣಾಯಕ ಸರ್ಕಾರ ಎಂಬ ಮನೋಭಾವನೆಯನ್ನು ಜನರಲ್ಲಿ ಬಿತ್ತುತ್ತಿದೆ.
ದಶಕಗಳ ಕಾಲದ ಯುದ್ದದಿಂದ ಬಸವಳಿದಂತೆ ಕಾಣುವ ಹಿಂದೂ ಮಹಾಸಾಗರದ ಮಧ್ಯದಲ್ಲಿರುವ ಈ ದ್ವೀಪ ರಾಷ್ಟ್ರದಲ್ಲಿ ಈ ಬಲಿಷ್ಠ ಸರ್ಕಾರ ಎಂಬ ತೋರ್ಪಡಿಸಿಕೊಳ್ಳುವಿಕೆ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಮುಖ್ಯವಾಗಿ ಅಲ್ಲಿನ ಬಹುಸಂಖ್ಯಾತ ಸಿಂಹಳ ಬೌಧ್ದರ ನಡುವೆ, ಈ ತೋರ್ಪಡಿಸಿಕೊಳ್ಳುವಿಕೆ ಬಹು ಯಶಸ್ವಿಯಾಗಿದೆ. ಶ್ರೀಲಂಕಾ ಪೀಪಲ್ಸ್ ಫ್ರಂಟ್ (ಎಸ್‍ಎಲ್‍ಪಿಪಿ) ನೇತೃತ್ವ ವಹಿಸಿರುವ ಇಬ್ಬರು ರಾಜಪಕ್ಸೆ ಸಹೋದರರು, (ಒಬ್ಬರು ದೇಶದ ಅಧ್ಯಕ್ಷರು, ಇನ್ನೊಬ್ಬರು ದೇಶದ ಹಂಗಾಮಿ ಪ್ರಧಾನಿ), ಈ ತೋರ್ಪಡಿಸಿಕೊಳ್ಳುವಿಕೆಯ ಕಾರ್ಯತಂತ್ರದ ಮೂಲಕ ಜನ ಮಾನಸದಲ್ಲಿ ಅಚ್ಚೊತ್ತಿದ್ದಾರೆ. ಇದು ಅವರಿಗೆ ಚುನಾವಣೆ ಗೆಲ್ಲುವ ಸೂತ್ರವಾಗಿ ಪರಿಣಮಿಸಿದೆ. ಇದನ್ನು ಅವರು ಆಗಸ್ಟ್ 5ರ ಚುನಾವಣೆ ಹಿನ್ನೆಲೆಯಲ್ಲಿ ಬಹುವಾಗಿ ಬಳಸಿಕೊಳ್ಳುತ್ತಿದ್ದಾರೆ.
ಶ್ರೀಲಂಕಾ ಸರ್ಕಾರ ತಾನು ಅತ್ಯಂತ ಸಶಕ್ತ, ಪ್ರಬಲ ಸರಕಾರ ಎಂದು ಮತ್ತೊಮ್ಮೆ ತೋರ್ಪಡಿಸಿಕೊಳ್ಳಲು ಸಜ್ಜಾಗಿದೆ. ದಕ್ಷಿಣ ಏಷ್ಯಾ ದೇಶಗಳ ಪೈಕಿ ಕೋವಿಡ್19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಏಕೈಕ ಸರಕಾರ ಎಂಬ ವಾದ ಸರಣಿಯನ್ನು ಅದು ಮುಂದಿಟ್ಟಿದೆ. ಶ್ರೀಲಂಕಾದಲ್ಲಿ ಈವರೆಗೆ ಕೋವಿಡ್ 19ಕ್ಕೆ ಬಲಿಯಾಗಿರುವುದು ಕೇವಲ 11 ರೋಗಿಗಳು. ಜಗತ್ತಿನ ಉಳಿದೆಲ್ಲಾ ರಾಷ್ಟ್ರಗಳು ಕೋವಿಡ್19 ವಿರುದ್ಧದ ಹೋರಾಡದಲ್ಲಿ ತೊಡಗಿದ್ದರೆ, ಶ್ರೀಲಂಕಾದಲ್ಲಿ ಮಾತ್ರ ಚುನಾವಣೆಯ ಕಾವು ಏರ ತೊಡಗಿದೆ. "ಇದು ನೈಜ ರಾಜಕೀಯ ನಾಯಕತ್ವದ ಮೇಲಣ ಅಗ್ನಿಪರೀಕ್ಷೆ," ಎಂದು ವಿಮಲ್ ವೀರಸೇನ, ಎಸ್‍ಎಲ್‍ಪಿಪಿಯ ಅಭ್ಯರ್ಥಿ ಪ್ರಚಾರಗೈಯುತ್ತಿದ್ದಾರೆ. ದೇಶದ ವಾಣಿಜ್ಯ ರಾಜಧಾನಿ ಕೊಲೊಂಬೋದಿಂದ ಅವರು ಆಡಳಿತರೂಢ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಒಂದು ಸಾರ್ವಜನಿಕ ಭಾವನೆಯಾಗಿ ಇದು ಹಬ್ಬುತ್ತಿದೆ. ಈ ಭಾವನೆಯನ್ನು ಪೋಷಿಸಿ, ಉಳಿಸಿಕೊಂಡಿರುವುದು ರಾಜಪಕ್ಷೆ ಕುಟುಂಬದ ಹೆಗ್ಗಳಿಕೆ.
ಆಗಸ್ಟ್ ರಂದು, 70 ರಾಜಕೀಯ ಪಕ್ಷಗಳು, 313 ಸ್ವತಂತ್ರ ಗುಂಪುಗಳು, ಹಾಗೂ 7,452 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎಸ್‍ಎಲ್‍ಪಿಪಿ ಇನ್ನೊಂದಿಷ್ಟು ಚುನಾವಣಾ ಸರಕುಗಳನ್ನು ಮುನ್ನಲೆಗೆ ತಂದಿತ್ತು. ರಾಜಪಕ್ಷ ಕುಟುಂಬಸ್ಥರು ಈಗ ರಾಷ್ಟ್ರೀಯ ಹೀರೋಗಳು ಎಂಬ ರೀತಿಯಲ್ಲಿ ಈಗ ಪ್ರತಿಬಿಂಬಿತಗೊಳ್ಳುತ್ತಿದ್ದಾರೆ. ಅವರಿಗೆ ಈ ವ್ಯಕ್ತಿತ್ವವನ್ನು ತಂದುಕೊಟ್ಟದ್ದು, ಲಿಬರೇಷನ್ ಟೈಗರ್ಸ್ ತಮಿಳ್ ಈಳಂ (ಎಲ್‍ಟಿಟಿಯ) ಜೊತೆಗಿನ ನಿರ್ಣಾಯಕ ಯುದ್ದದಲ್ಲಿನ ಗೆಲುವು. ಈ ಗೆಲುವಿನ ಬಳಿಕ ಈ ದ್ವೀಪ ರಾಷ್ಟ್ರದಲ್ಲಿ ಒಂದು ಬಗೆಯ ಸಾಮಾನ್ಯತೆಯ ವಾತಾವರಣ ಬಂದಿದೆ. ಚೀನಾದಿಂದ ಸಾಲದ ರೂಪದಲ್ಲಿ ಸಂಪನ್ಮೂಲ ಒಟ್ಟುಗೂಡಿಸಿ ದೊಡ್ಡ ಪ್ರಮಾಣದಲ್ಲಿ ಮೂಲ ಸೌಕರ್ಯ ಕಾಮಗಾರಿಗಳನ್ನು ಅವರು ಕೈಗೊಂಡಿದ್ದಾರೆ. ಇದರ ಜೊತೆಗೆ ಅಲ್ಪಸಂಖ್ಯಾತ ಮತಗಳ ನೆರವಿಲ್ಲದೆ ಗೆಲ್ಲಲು ಸಾಧ್ಯವಿಲ್ಲ ಎಂಬ ಕಲ್ಪನೆಯನ್ನು ಕೂಡಾ ಅವರು ಹುಸಿಗೊಳಿಸಿದ್ದಾರೆ. ಈ ಹಿಂದೆ ಅಲ್ಪಸಂಖ್ಯಾತರ ಮತಗಳನ್ನು ಕ್ರೂಡಿಸಲು ಯಾರಿಗೆ ಸಾಧ್ಯವಿದೆಯೋ ಅವರಿಗೆ ಮಾತ್ರ ಗೆಲುವು ಸಾಧ್ಯ ಎಂಬ ಭಾವನೆ ಇತ್ತು. ಇದರ ಜೊತೆಗೆ ಕೋವಿಡ್19ನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿರುವುದು ಇವರಿಗೆ ಚುನಾವಣೆಯಲ್ಲಿ ಇನ್ನಷ್ಟು ಅನುಕೂಲ ಮಾಡಿಕೊಡಲಿದೆ.
ಈ ಎಲ್ಲಾ ಸಾಧನೆಗಳು, ಮತದಾರರನ್ನು ಆಕರ್ಷಿಸಲು ದೊಡ್ಡ ಮಟ್ಟಿಗೆ ನೆರವಾದರೂ, ಪಕ್ಷದಲ್ಲಿ ಆಂತರಿಕ ಬೇಗುದಿ ಮೂಡಿದೆ. ಶ್ರೀಲಂಕಾದ ರಾಜಕೀಯದಲ್ಲಿ ಅತ್ಯಂತ ಪ್ರಬಲ ಸಹೋದರರೆಂದರೆ, ಅತ್ಯಂತ ಪ್ರಬಲ ಅಧ್ಯಕ್ಷರಾಗಿರುವ ಗೊಟಬಯ ರಾಜಪಕ್ಷ ಹಾಗೂ ಅವರ ಹಿರಿಯ ಅಣ್ಣ, ಎರಡು ಅವಧಿಗೆ ದೇಶದ ಅಧ್ಯಕ್ಷರಾಗಿದ್ದ ಮಹಿಂದ ರಾಜಪಕ್ಷ. ಸಂಸತ್‍ನಲ್ಲಿ ಅಧಿಕಾರಕ್ಕೇರಲು ಸಾಮೂಹಿಕ ಪ್ರಯತ್ನದ ಜೊತೆಗೆ, ಈ ಇಬ್ಬರೂ ನಾಯಕರೂ, ಎಲ್ಲಾ ಸಂದರ್ಭಗಳಲ್ಲಿ ಏಕತೆಯನ್ನು ಪ್ರದರ್ಶಿಸುತ್ತಾರೆ. ಇದು ಮತದಾರರಿಗೆ ದೊಡ್ಡ ಮಟ್ಟದ ಆಕರ್ಷಣೆಯಾಗಿದೆ. ಈ ಏಕತೆಯ ಪ್ರದರ್ಶನಕ್ಕೆ ಕಾರಣಗಳು ಹಲವಿರಬಹುದು. ಈ ಕಾರಣಗಳು ಮತದಾರರಿಗೆ ಅರ್ಥವಾಗುವುದಿಲ್ಲ. ಅವರು ಈ ಇಬ್ಬರೂ ನಾಯಕರನ್ನು ಜೋಡೆತ್ತುಗಳ ರೀತಿಯಲ್ಲೇ ನೋಡುತ್ತಾರೆ.
ಮೂರನೇ ಎರಡರಷ್ಟು ಬಹುಮತ
ಎಸ್‍ಎಲ್‍ಪಿಪಿಯ ನಾಯಕ, ಈ ದ್ವೀಪ ದೇಶದ ಅಧ್ಯಕ್ಷರಾಗಿರುವ ಗೊಟಬಯ ರಾಜಪಕ್ಷ, ಈ ಚುನಾವಣೆಯಲ್ಲಿ ಜನರು ಸಂಸತ್‍ನಲ್ಲಿ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತ ಗೆದ್ದುಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ. ಇದಕ್ಕೆ ಕಾರಣ, ಸಂಸತ್‍ನಲ್ಲಿ ಅಂಗೀಕಾರಗೊಂಡಿರುವ ಸಂವಿಧಾನದ 19ನೇ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವುದು. ಈ ತಿದ್ದುಪಡಿ ಕಾಯ್ದೆ 2015ರ ಚುನಾವಣೆಯಲ್ಲಿ ಆಯ್ಕೆಗೊಂಡ ಸುಧಾರಣಾವಾದಿ ಸರಕಾರದ ಅವಧಿಯಲ್ಲಿ ಜಾರಿಗೊಂಡಿತ್ತು. ಈ ಸಂದರ್ಭದಲ್ಲಿ ಮೈತ್ರಿಪಾಲ ಸಿರಿಸೇನಾ ದೇಶದ ಅಧ್ಯಕ್ಷರಾಗಿದ್ದರೆ, ರನಿಲ್ ವಿಕ್ರಮಸಿಂಘೆ ಪ್ರಧಾನಿಯಾಗಿದ್ದರು.
1978ರಲ್ಲಿ ಜಾರಿಗೆ ತಂದ ಶ್ರೀಲಂಕಾದ ಸಂವಿಧಾನದ ಪ್ರಕಾರ, ದೇಶದ ಅಧ್ಯಕ್ಷರಿಗೆ ಸಂಪೂರ್ಣ ಕಾರ್ಯಾಂಗ ಅಧಿಕಾರಗಳಿದ್ದವು. ಕಾನೂನಿನ ಪ್ರಕಾರ ಅಧ್ಯಕ್ಷ ಅತ್ಯಂತ ಪ್ರಭಾವಶಾಲಿ. ಆದರೆ, 2015ರಲ್ಲಿ ಜಾರಿಗೆ ತರಲಾದ 19ನೇ ತಿದ್ದುಪಡಿ, ಅಧ್ಯಕ್ಷರ ನಿರಂಕುಶ ಅಧಿಕಾರಗಳನ್ನು ಕಿತ್ತು ಹಾಕಿತು. ಜೊತೆಗೆ ಅದು, ಪ್ರಧಾನಿ ಹುದ್ದೆಯ ಅಧಿಕಾರಗಳನ್ನು ಹೆಚ್ಚಿಸಿತು. ಸ್ವತಂತ್ರ ಆಯೋಗಗಳ ರಚನೆಗೆ ಈ ತಿದ್ದುಪಡಿ ಅವಕಾಶ ನೀಡಿತು. ದೇಶದ ಪ್ರಮುಖ ಸಾರ್ವಜನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಇದು ಅಂತ್ಯಗೊಳಿಸಿತು. ಇದು ದೇಶದ ಯಾವುದೇ ಅಧ್ಯಕ್ಷರಿಗೆ ಒಪ್ಪಿಗೆಯಾಗುವಂತದ್ದಲ್ಲ. ಈ ಹಿನ್ನೆಲೆಯಲ್ಲಿ ಗೊಟಬಯ ರಾಜಪಕ್ಷ ಸ್ವಯಂ ಶಿಸ್ತಿನ ಸಮಾಜವೊಂದರ ಮರುಸ್ಥಾಪನೆಯ ಹೆಸರಿನಲ್ಲಿ, ಈ ತಿದ್ದುಪಡಿ ರದ್ದತಿಗೆ ಯತ್ನಿಸುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿಯೇ ಅವರು, ಹಲವಾರು ಸೇನಾಧಿಕಾರಿಗಳನ್ನು ಸಾರ್ವಜನಿಕ ಸೇವೆಗೆ ನಿಯುಕ್ತಿಗೊಳಿಸಿಕೊಂಡಿದ್ದಾರೆ. ಕೆಲವು ಸೇನಾಧಿಕಾರಿಗಳು ಅತ್ಯಂತ ಮಹತ್ವದ ಸಾರ್ವಜನಿಕ ಹುದ್ದೆಗಳಲ್ಲಿದ್ದಾರೆ.
ಪ್ರಧಾನಿ ಮಹಿಂದ ರಾಜಪಕ್ಷೆ ಅವರಿಗೆ ಈ ಚುನಾವಣೆ ಹಿಂದಿನ ಚುನಾವಣೆಯಂತೆಯೆ ಇದೆ. 19ನೇ ಸಾಂವಿಧಾನಿಕ ತಿದ್ದುಪಡಿ, ಹೆಚ್ಚು ಸಶಕ್ತ ಪ್ರಧಾನಿಯನ್ನು ಈ ದ್ವೀಪ ರಾಷ್ಟ್ರದಲ್ಲಿ ಸೃಷ್ಟಿಸಿದೆ. ಇದು ಕಾರ್ಯಾಂಗ ಹಾಗೂ ಶಾಸಕಾಂಗದ ನಡುವಿನ ಅಧಿಕಾರ ಹಂಚಿಕೆಯಲ್ಲಿ ಹೆಚ್ಚಿನ ಸಮನ್ವಯತೆ ಸಾಧಿಸಿದೆ. ಈ ತಿದ್ದುಪಡಿಗೆ ಹಿಂದೆ, ಪ್ರಧಾನಿ ಹುದ್ದೆ ಬರೀ ಆಲಂಕಾರಿಕ ಹುದ್ದೆಯಾಗಿತ್ತು. ತನ್ನ ವೈಯಕ್ತಿಕ ಜನಪ್ರಿಯತೆ, ಹಾಗೂ ದೇಶದ ಆರ್ಥಿಕತೆಯ ಮೇಲಿನ ಹಿಡಿತ, ಈ ಬಾರಿ ಮಹಿಂದಾ ರಾಜಪಕ್ಷೆ ವಿಭಿನ್ನ ರೀತಿಯಲ್ಲಿ ಮತದಾರರನ್ನು ತಲುಪುವಂತೆ ಮಾಡಿದೆ. ಚುನಾವಣೆಯ ಬಳಿಕ, ಅವರು ತಮ್ಮ ಗುರಿ ಸಾಧನೆಗೆ ಹೆಚ್ಚು ಶ್ರಮಿಸಬೇಕಿದೆ. ಸದ್ಯಕ್ಕೆ ಅವರ ಎದುರು ಇರುವ ಗುರಿಯೆಂದರೆ, ಚುನಾವಣೆ ಗೆಲ್ಲುವುದು.
ಎಸ್‍ಎಲ್‍ಪಿಪಿ ಮೂರನೇ ಎರಡರಷ್ಟು ಬಹುಮತ ಗಳಿಸುವುದು ಕಷ್ಟಕರ. ಇದೊಂದು ಅತಿ ಆತ್ಮವಿಶ್ವಾಸದ ಗುರಿ. ಮಹಿಂದ ರಾಜಪಕ್ಷೆಯ ಅದೃಷ್ಟವೆಂದರೆ, ಈ ಚುನಾವಣೆ ಬಹುತೇಕ ಏಕಮುಖವಾಗಿದ್ದು, ಎಸ್‍ಎಲ್‍ಪಿಪಿ ಕುದುರೆ ಮಾತ್ರ ಮುಂದಿದೆ. ಈ ಆಡಳಿತಾರೂಢ ಪಕ್ಷ ಹೆಚ್ಚಿನ ಕಷ್ಟವಿಲ್ಲದೆ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆ ಇದೆ. ನಿರ್ಣಾಯಕ ನಾಯಕತ್ವ, ಪ್ರಭಾವಶಾಲಿ ಪ್ರಚಾರ ಯಂತ್ರ, ಸಾರ್ವಜನಿಕ ಸಂಸ್ಥೆಗಳ ಮಿಲಿಟರೀಕರಣ, ಹೀಗೆ ಹಲವು ಅಂಶಗಳು ಮಹಿಂದ ರಾಜಪಕ್ಷೆ ಮತ್ತೆ ಅಧಿಕಾರಕ್ಕೇರಲು ಪೂರಕವಾಗಿವೆ. ಸಾರ್ವಜನಿಕ ಸಂಸ್ಥೆಗಳ ಮಿಲಿಟರೀಕರಣ, ಶ್ರೀಲಂಕಾಸ ಸಮಾಜವನ್ನು ಶಿಸ್ತಿನ ಪಥದಲ್ಲಿ ಮುಂದುವರಿಸಲು ಹಾಗೂ ಅವುಗಳ ಕಾರ್ಯಕ್ಷಮತೆ ಹೆಚ್ಚಿಸಲು ಅನಿವಾರ್ಯ ಎಂಬ ವಾದ ಮುಂದಿಡಲಾಗುತ್ತಿದೆ. ವಿರೋಧ ಪಕ್ಷಗಳ ನಡುವಣ ಭಿನ್ನಮತ, ಅಶಿಸ್ತು ಹಾಗೂ ಭಿನ್ನಮತೀಯರಿಂದ ಹೊಸ ಪಕ್ಷ ರಚನೆ, ಮಹಿಂದ ರಾಜಪಕ್ಷೆಯವರಿಗೆ ಈ ಚುನಾವಣೆ ಗೆಲ್ಲಲು ಅನುಕೂಲಕರ ವಾತಾವರಣ ಸೃಷ್ಟಿಸಿವೆ. ಪ್ರಮುಖ ವಿರೋಧ ಪಕ್ಷ ಎರಡು ಹೋಳಾಗಿದ್ದು, ವಿರೋಧ ಪಕ್ಷಗಳ ಮತ ಹಂಚಿಹೋಗುವುದು ನಿಶ್ಚಿತ. ಇದರ ಲಾಭ ಆಡಳಿತಾರೂಢ ಪಕ್ಷಕ್ಕೆ ದೊರಕಲಿದೆ.
ಸಿಂಹಳ-ಬೌಧ್ಧ ಜನಾಂಗದ ಬಹುತೇಕರ ಮಧ್ಯೆ, ಸಾರ್ವಜನಿಕ ನಂಬಿಕೆಯನ್ನು ರಾಜಪಕ್ಷೆ ಸಹೋದರರು ಉಳಿಸಿಕೊಂಡಿದ್ದಾರೆ. ಹಕ್ಕುಗಳ ಉಲ್ಲಂಘನೆ, ಒತ್ತಡದ ಮೂಲಕ ಕಾರ್ಯಸಾಧನೆಯಂತಹ ಆರೋಪಗಳ ನಡುವೆಯೂ, ಬಹುಸಂಖ್ಯಾತರ ಒಲವನ್ನು ಉಳಿಸಿಕೊಳ್ಳುವಲ್ಲಿ ಸಹೋದರರು ಯಶಸ್ವಿಯಾಗಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ಪ್ರಮುಖ ವಿರೋಧಪಕ್ಷದಲ್ಲಿ ಎರಡು ಗುಂಪುಗಳಿವೆ. ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್‍ಪಿ) ಮಾಜಿ ಪ್ರಧಾನಿ ರನಿಲ್ ವಿಕ್ರಮ್‍ಸಿಂಘೆ ಹಾಗೂ ಪಕ್ಷದ ಇನ್ನೋರ್ವ ಹಿರಿಯ ನಾಯಕ, ಮಾಜಿ ವಸತಿ ಸಚಿವ ಸಜಿತ್ ಪ್ರೇಮದಾಸ ನೇತೃತ್ವದಲ್ಲಿ ವಿಭಜನೆಗೊಂಡಿದೆ. ಇಷ್ಟಿದ್ದರೂ, ವಿಶ್ಲೇಷಕರ ಪ್ರಕಾರ, ಎಲ್ಲಾ ನಿರ್ಣಾಯಕ ಅಂಶಗಳನ್ನು ಒಟ್ಟು ಗೂಡಿಸಿ ಹೇಳುವುದಾದರೆ, ರಾಜಪಕ್ಷೆ ಗೆಲುವು ನಿಶ್ಚಿತ. ಆದರೆ ಎಸ್‍ಎಲ್‍ಪಿಪಿ ಮೂರನೇ ಎರಡರಷ್ಟು ಬಹುಮತ ಪಡೆಯುವ ಸಾಧ್ಯತೆ ಇಲ್ಲ. ಆದರೆ ಸರಕಾರ ನಡೆಸುಷ್ಟು ಬಹುಮತ ಪಕ್ಷಕ್ಕೆ ಲಭಿಸುವ ಸಾಧ್ಯತೆ ಇದೆ.
ನೆರೆಹೊರೆಯ ರಾಷ್ಟ್ರಗಳ ಜೊತೆಗಿನ ಸಂಬಂಧಗಳು
ಸಹೋದರರ ರಾಜಕೀಯ ಅಗತ್ಯತೆಗಳೇನೆ ಇರಲಿ, ಮತ್ತೊಮ್ಮೆ ರಾಜಪಕ್ಷೆ ಸಹೋದರರು ಅಧಿಕಾರಕ್ಕೇರಿದರೆ, ಮಹೀಂದ ರಾಜಪಕ್ಷೆ ದೇಶವನ್ನು ಮತ್ತಷ್ಟು ಚೀನಾದ ಪ್ರಭಾವದ ಕಕ್ಷೆಯೊಳಗೆ ಸೇರಿಸುವುದು ಖಚಿತ. ಏಕೆಂದರೆ ದೇಶದ ಆರ್ಥಿಕ ಪುನಶ್ಚೇತನಕ್ಕೆ ಹೊರಗಿನ ನೆರವು ಬೇಕಿದೆ.
ಶ್ರೀಲಂಕಾದಲ್ಲಿ ಆಗಸ್ಟ್5ರಂದು ನಡೆಯಲಿರುವ ಮತದಾನವನ್ನು ವಿಶ್ವದ ಹಲವಾರು ಪ್ರಬಲ ರಾಷ್ಟ್ರಗಳು ಕುತೂಹಲದಿಂದ ಗಮನಿಸುತ್ತಿವೆ. ಅದರಲ್ಲಿ ಮುಖ್ಯವಾದುವು ಅಮೇರಿಕಾ, ಚೀನಾ ಹಾಗೂ ಭಾರತ. ಈ ಹಿಂದೂ ಸಾಗರ ಮಧ್ಯದಲ್ಲಿರುವ ಈ ದ್ವೀಪ ರಾಷ್ಟ್ರ ವಿಶ್ವದ ಅತ್ಯಂತ ಬೇಡಿಕೆಯ ಸಮುದ್ರಮಾರ್ಗವನ್ನು ಹೊಂದಿದೆ. ಈಗಿನ ಆಡಳಿತ ಚೀನಾದ ಪರ ದೊಡ್ಡ ಮಟ್ಟದಲ್ಲಿ ವಾಲಿದೆ. ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್ (ಬಿಆರ್‍ಐ) ಅಡಿಯಲ್ಲಿ ಚೀನಾದಿಂದ ದೊಡ್ಡ ಮ್ಟದ ಆರ್ಥಿಕ ನೆರವನ್ನು ಶ್ರೀಲಂಕಾ ಪಡೆಯುತ್ತಿದೆ. ಈ ಪೈಕಿ ಹೆಚ್ಚಿನ ಹೂಡಿಕೆ ರಾಜಪಕ್ಷೆಯ
ಮೂಲ ಸ್ಥಳವಾದ ಹಂಬಾಂಟೋಟದಲ್ಲಿ ನಡೆಯುತ್ತಿದೆ. ಈ ನಗರ, ದೇಶದ ಅತಂತ ದಕ್ಷಿಣ ಭಾಗದಲ್ಲಿದೆ.
ಚೀನಾದ ಆರ್ಥಿಕ ಶಕ್ತಿಯ ಜೊತೆಗೆ ಸ್ಪರ್ಧಿಸಲು ಭಾರತಕ್ಕೆ ಸಾಧ್ಯವಿಲ್ಲ. ಹೀಗಾಗಿ, ತನ್ನ ನೆರೆಹೊರೆಯ ಶ್ರೀಲಂಕಾ ಮೇಲೆ ಹೆಚ್ಚುತ್ತಿರುವ ಚೀನಾ ಪ್ರಭಾವದ ಬಗ್ಗೆ ಭಾರತ ತುಂಬಾ ಜಾಗರೂಕತೆ ತಾಳಿದೆ. ರಾಜಪಕ್ಷೆ ಅಧಿಕಾರಕ್ಕೆರುವವರೆಗೆ, ಶ್ರೀಲಂಕಾ ಪಾಶ್ಚಿಮಾತ್ಯ ಪರ ವಿದೇಶಾಂಗ ನೀತಿ ಹೊಂದಿತ್ತು. ಇದು ಕೂಡಾ ಭಾರತಕ್ಕೆ ಮೆಚ್ಚುಗೆಯಾಗಿರಲಿಲ್ಲ. ಈಗ ಶ್ರೀಲಂಕಾ, ಚೀನಾ ಪರ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ.
ಜುಲೈ ಮೊದಲ ಭಾಗದಲ್ಲಿ, ಮಹಿಂದ ರಾಜಪಕ್ಷೆ, ನೀಡಿದ ಸಾರ್ವಜನಿಕ ಹೇಳಿಕೆಯೊಂದರ ಪ್ರಕಾರ, ಕೊಲಂಬೋ ಬಂದರಿನ ಪೂರ್ವ ಕಂಟೈನರ್ ಟರ್ಮಿನಲ್ (ಇಸಿಟಿ) ಅಭಿವೃದ್ಧಿ ಸಂಬಂಧ 2019ರಲ್ಲಿ ಭಾರತ, ಶ್ರೀಲಂಕಾ ಹಾಗೂ ಜಪಾನ್‍ಗಳು ಸಹಿ ಹಾಕಿದ ತ್ರಿಪಕ್ಷೀಯ ಒಪ್ಪಂದ ಸಂಬಂಧ ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ದೇಶದ ಕಾರ್ಮಿಕ ಸಂಘಟನೆಗಳು, ಇಂತಹ ಒಪ್ಪಂದಗಳ ಮೂಲಕ, ದೇಶದ ಆಸ್ತಿಯನ್ನು ಭಾರತಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸರಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿವೆ. ಈ ನಡುವೆ, ಆಡಳಿತ ಪಕ್ಷ ಅದರಲ್ಲೂ ಮುಖ್ಯವಾಗಿ ರಾಜಪಕ್ಷೆ ಸಹೋದರರು ಸಾರ್ವಜನಿಕರನ್ನು ಸಮಾಧಾನಪಡಿಸುವ ಹೆಸರಿನಲ್ಲಿ ಸಂಸತ್‍ನಲ್ಲಿ ದೊಡ್ಡ ಮಟ್ಟದ ಬಹುಮತದ ಮೇಲೆ ಕಣ್ಣಿಟ್ಟಿದ್ದಾರೆ.
ಈ ತ್ರಿಪಕ್ಷೀಯ ಸಹಕಾರ ಒಪ್ಪಂದ ಪತ್ರದ ಪ್ರಕಾರ, ಶ್ರೀಲಂಕಾದ ಬಂದರು ಮಂಡಳಿ (ಎಸ್‍ಎಲ್‍ಪಿಎ), ಈ ವ್ಯವಸ್ಥೆಯ 100% ಮಾಲಿಕತ್ವ ಹೊಂದಲಿದೆ. ಇದರ ಜೊತೆಗೆ, ಶ್ರೀಲಂಕಾ ಭಾರತದಿಂದ 960$ ಸಾಲವನ್ನು ಅಪೇಕ್ಷಿಸುತ್ತಿದೆ. ಜೊತೆಗೆ ಭಾರತದ ಜೊತೆಗೆ ಸಾರ್ಕ್ ಒಪ್ಪಂದದ ಪ್ರಕಾರ ನಗದು ನೋಟುಗಳ ವಿನಿಮಯ ಕೂಡಾ ಅಪೇಕ್ಷಿಸಿದೆ. ಆದರೆ ಭಾರತ, ಈ ಎರಡೂ ಪ್ರಸ್ತಾಪಗಳನ್ನು ಸದ್ಯಕ್ಕೆ ತಡೆಹಿಡಿದಿದೆ.
ಈ ಚುನಾವಣೆಯ ಫಲಿತಾಂಶ ಶ್ರೀಲಂಕಾದ ರಾಜಕೀಯ ಭವಿಷ್ಯ, ಹಾಗೂ ದೇಶ ಮುಂದೆ ಸಾಗಬಹುದಾದ ದಾರಿ, ಅಧ್ಯಕ್ಷರಿಗೆ ಪರಮಾಧಿಕಾರ ನೀಡುವುದು, ಹಾಗೂ ಅಲ್ಲಿನ ನ್ಯಾಯ ವ್ಯವಸ್ಥೆ ನಿರ್ಧರಿಸುವುದರ ಜೊತೆಗೆ, ಚೀನಾಗೆ ಈ ದ್ವೀಪ ರಾಷ್ಟ್ರ ಎಷ್ಟು ಹತ್ತಿರವಾಗಲಿದೆ ಎಂಬುದನ್ನು ಕೂಡಾ ನಿರ್ಧರಿಸಲಿದೆ. ಇದು ಭಾರತ ಹಾಗೂ ಶ್ರೀಲಂಕಾ ನಡುವೆ ಹೊಸ ರೀತಿಯ ಸಮಸ್ಯೆಗಳನ್ನು ಹುಟ್ಟಿಹಾಕಬಹುದು. ಏಕೆಂದರೆ, ಶ್ರೀಲಂಕಾ ಭಾರತದ ಬೌಗೋಳಿಕ ಸುರಕ್ಷೆಯ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಜಾಗದಲ್ಲಿದೆ.
ಭಾರತ-ಶ್ರೀಲಂಕಾ ನಡುವಣೆ ಸಂಬಂಧ ಯಾವತ್ತೂ ಅತ್ಯಂತ ಸುಲಭದ್ದಾಗಿರಲಿಲ್ಲ. ಈ ಸಂಬಂಧದಲ್ಲಿ ಹಲವಾರು ಏರಿಳಿತಗಳು ಕಾಣಿಸಿಕೊಂಡವು. ಆದರೆ ಭಾರತದ ಪ್ರಾದೇಶಿಕ ಸುರಕ್ಷತೆ, ಉಳಿದೆಲ್ಲಾ ಅಂಶಗಳನ್ನು ಗೌಣವಾಗಿಸಿತು. ನವದೆಹಲಿ ಎಲ್ಲಾ ಪ್ರತಿಕ್ರಿಯೆಗಳು, ಈ ದ್ವೀಪ ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಭಾವದ ಭೀತಿ ಹಿನ್ನೆಲೆಯಲ್ಲಿಯೇ ಇರುತ್ತಿದ್ದವು. ಅದರಲ್ಲೂ ಮುಖ್ಯವಾಗಿ ಭಾರತದ ವ್ಯಾಪಾರ ವಹಿವಾಟು ವೃದ್ಧಿಯನ್ನು ಇದು ಗಮನದಲ್ಲಿಟ್ಟುಕೊಂಡಿತ್ತು. ಭಾರತದೊಂದಿಗಿನ ಸಂಬಂಧವನ್ನು ಚೆನ್ನಾಗಿಟ್ಟುಕೊಂಡೇ, ಚೀನಾದ ಜೊತೆಗೆ ಮಹಿಂದ ರಾಜಪಕ್ಷೆ ಮೈತ್ರಿ ಬಲವರ್ಧನೆಯಲ್ಲಿ ತೊಡಗಿದ್ದರು. ಇದನ್ನು ಅವರು ಮತ್ತೆ ಮುಂದುವರಿಸುವ ಸಾಧ್ಯತೆ ಇದೆ. ಜೊತೆಗೆ, ಹಿಂದಿಗಿಂತಲೂ ಹೆಚ್ಚು ವ್ಯವಸ್ಥಿತವಾಗಿ ಅವರು ಚೀನಾ ಜೊತೆಗಿನ ಸಂಬಂಧ ವೃದ್ಧಿಯಲ್ಲಿ ತೊಡಗುವ ಸಾಧ್ಯತೆಗಳಿವೆ. ಏಕೆಂದರೆ ಕೋವಿಡ್ ಕಾರಣದಿಂದಾಗಿ ಶ್ರೀಲಂಕಾದ ಆರ್ಥಿಕತೆ ನೆಲಕಚ್ಚಿದೆ. ಈ ಹಿನ್ನೆಲೆಯಲ್ಲಿ ಭಾರತ ಶ್ರೀಲಂಕಾ ಜೊತೆಗಿನ ಸಂಬಂಧ ಸುಧಾರಣೆಗೆ ಹಿಂದೆಂದಿಗಿಂತಲೂ ಹೆಚ್ಚು ಒತ್ತಾಸೆ ತೋರಬೇಕಿದೆ. ಏಕೆಂದರೆ, ಹಿಂದೂ ಮಹಾಸಾಗರದಲ್ಲಿ ತಮ್ಮ ಪ್ರಭಾವ ಉಳಿಸಿಕೊಳ್ಳಬೇಕಾದರೆ, ಶ್ರೀಲಂಕಾ ಜೊತೆಗೆ ಉತ್ತಮ ಸಂಬಂಧ ಭಾರತಕ್ಕೆ ಅನಿವಾರ್ಯ. ಈ ನಡುವೆ, ಆಗಸ್ಟ್ 5ರ ಚುನಾವಣೆ ಬಳಿಕ, ಶ್ರೀಲಂಕಾ, ಚೀನಾದತ್ತ ಇನ್ನಷ್ಟು ಹೆಚ್ಚು ವಾಲುವ ಸಾಧ್ಯತೆಗಳೇ ದಟ್ಟವಾಗಿವೆ.
ದಿಲ್‍ರುಕ್ಷಿ ಹಂದುನ್ನೆಟ್ಟಿ- ಕೊಲೊಂಬೋದ ಖ್ಯಾತ ರಾಜಕೀಯ ವಿಶ್ಲೇಷಕರು, ತನಿಖಾ ಪತ್ರಕರ್ತರು ಹಾಗೂ ವಕೀಲರು.