ನವದೆಹಲಿ : ಪಬ್ಜಿ ಮೊಬೈಲ್ ಮತ್ತು ಪಬ್ಜಿ ಲೈಟ್ ಗೇಮ್ಗಳು ಭಾರತದಲ್ಲಿ ಅಧಿಕೃತವಾಗಿ ತನ್ನ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದ್ದು, ಇದೊಂದು ವಿಷಾದನೀಯ ನಿರ್ಧಾರ, ಭಾರತದಲ್ಲಿ ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಟೆನ್ಸೆಂಟ್ ಗೇಮ್ಸ್ ಫೇಸ್ಬುಕ್ನಲ್ಲಿ ಬರೆದುಕೊಂಡಿದೆ.
ಬಳಕೆದಾರರ ದತ್ತಾಂಶವನ್ನು ರಕ್ಷಿಸುವುದು ಯಾವಾಗಲೂ ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಯಾವಾಗಲೂ ಭಾರತಕ್ಕೆ ಅನ್ವಯವಾಗುವ ದತ್ತಾಂಶ ಸಂರಕ್ಷಣಾ ಕಾನೂನು ಮತ್ತು ನಿಬಂಧನೆಗಳನ್ನು ಪಾಲಿಸುತ್ತಿದ್ದೇವೆ. ನಮ್ಮ ಗೌಪ್ಯತೆ ನೀತಿಯಲ್ಲಿ ರಾಜಿಯಿಲ್ಲದೆ, ಬಳಕೆದಾರರ ಆಟದ ಮಾಹಿತಿಯನ್ನು ಪಾರದರ್ಶಕ ರೀತಿಯಲ್ಲಿ ಸಂರಕ್ಷಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.
ಸೆಪ್ಟೆಂಬರ್ 2 ರಂದು ಪಬ್ಜಿ ಮೊಬೈಲ್ ಮತ್ತು ಪಬ್ಜಿ ಲೈಟ್ನ್ನು ನಿಷೇಧಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಪಬ್ಜಿಯನ್ನು ನಿಷೇಧಿಸಲಾಗಿದೆ. ಪಬ್ಜಿ ಕಾರ್ಪೊರೇಷನ್ ಇತ್ತೀಚೆಗೆ ಟೆನ್ಸೆಂಟ್‌ನೊಂದಿಗಿನ ತಮ್ಮ ಪಾಲುದಾರಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಮತ್ತು ಭಾರತ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ಘೋಷಿಸಿತು.
ಜಾಗತಿಕವಾಗಿ 600 ದಶ ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳು ಮತ್ತು 50 ದಶ ಲಕ್ಷ ಸಕ್ರಿಯ ಆಟಗಾರರನ್ನು ಹೊಂದಿರುವ ಪಬ್ಜಿ ಗೇಮ್, ಭಾರತದಲ್ಲಿ ಸುಮಾರು 33 ದಶಲಕ್ಷ ಬಳಕೆದಾರರನ್ನು ಹೊಂದಿದೆ. ಈ ವರ್ಷದ ಮೊದಲಾರ್ಧದಲ್ಲಿ ಪಬ್ಜಿ ಮೊಬೈಲ್ 1.3 ಬಿಲಿಯನ್ ಡಾಲರ್ (ಸರಿ ಸುಮಾರು 9,731 ಕೋಟಿ ರೂ.) ಆದಾಯ ಗಳಿಸಿದೆ.
ಆರಂಭವಾದಾಗಿನಿಂದ ಇದುವರೆಗೆ 3 ಬಿಲಿಯನ್ ( ಸುಮಾರು 22,457 ಕೋಟಿ ರೂ.) ಗೆ ಆದಾಯವನ್ನು ಪಬ್ಜಿ ತಂದುಕೊಟ್ಟಿದೆ. ಕೋವಿಡ್ -19 ಲಾಕ್ಡೌನ್ನಿಂದಾಗಿ ಜನರು ಮನೆಯಲ್ಲಿಯೇ ಇದ್ದಿದ್ದರಿಂದ, ಲಾಕ್ ಡೌನ್ ಅವಧಿಯಲ್ಲಿ ಮಾತ್ರ 175 ಮಿಲಿಯನ್ ಪಬ್ಜಿ ಆ್ಯಪ್ ಇನ್ಸ್ಟಾಲ್ ಆಗಿವೆ.
ಪಬ್ಜಿಯ ಸ್ಥಾನವನ್ನು ತುಂಬಲು ಭಾರತದ್ದೇ ಆದ ಎನ್ಕೋರ್ ಕಂಪನಿಯ ಮತ್ತೊಂದು ಮಲ್ಟಿಪ್ಲೇಯರ್ ಆಕ್ಷನ್ ಗೇಮ್ ಫೌವ್-ಜಿ ರೆಡಿಯಾಗಿದ್ದು, ಮುಂದಿನ ತಿಂಗಳು ಪ್ರಾರಂಭವಾಗಲಿದೆ.