ಚಿಂತಾಮಣಿ: ಒಂಟಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಕಾಲಮೊಡುಗು ಗ್ರಾಮದ ಬಳಿ ನಡೆದಿದೆ.
ಗಡಿ ಜಿಲ್ಲೆ ಚಿಂತಾಮಣಿ ತಾಲೂಕಿನ ಅಂಕಾಲಮೊಡಗು ಗ್ರಾಮದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ತನ್ನ ಹೊಲದಲ್ಲಿ ಕಡಲೆಕಾಯಿ ಗಿಡ ಕೀಳುತ್ತಿದ್ದ ಸಮಯದಲ್ಲಿ ಒಂಟಿಯಾಗಿರುವ ಸಮಯ ನೋಡಿದ ಕಾಮುಕ, ಮಹಿಳೆಯನ್ನು ತೊಗರಿ ಗಿಡಗಳ ಮಧ್ಯೆ ಎಳೆದುಕೊಂಡು ಹೋಗಿ ಕುತ್ತಿಗೆಯನ್ನು ಶರ್ಟ್ನಿಂದ ಬಿಗಿದು ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ಎದ್ದೋಳಪಲ್ಲಿ ಗ್ರಾಮದ ಶಂಕರಪ್ಪ (29) ಪಕ್ಕದ ರಾಜ್ಯ ಆಂಧ್ರ ಪ್ರದೇಶದ ಮೂಲದವನಾಗಿದ್ದು, ತನ್ನ ಸ್ನೇಹಿತರೊಂದಿಗೆ ಬಾರ್ನಲ್ಲಿ ಕುಡಿದು, ಅಂಕಾಲಮೊಡಗು ಗ್ರಾಮದ ಹೊಲದ ಬಳಿ ಹೋಗಿದ್ದಾನೆ. ಈ ವೇಳೆ ಇಬ್ಬರು ಹೆಂಗಸರು ಮತ್ತು ಒಂದು ಮಗು ಕಡಲೆಕಾಯಿ ಗಿಡ ಕೀಳುತ್ತಿದ್ದು, ಅದೇ ಸಮಯದಲ್ಲಿ ಮಳೆ ಬಂದಾಗ ಒಬ್ಬ ಮಹಿಳೆ ಮಗುವಿನೊಂದಿಗೆ ಗ್ರಾಮದ ಕಡೆಗೆ ಹೋಗಿದ್ದಾಳೆ.
ಉಳಿದ ಒಂಟಿ ಮಹಿಳೆಯನ್ನು ಸಲುಗೆಯಿಂದ ಮಾತನಾಡಿಸುವ ನೆಪದಲ್ಲಿ ಬಲವಂತದಿಂದ ತೊಗರಿ ಗಿಡಗಳ ಮಧ್ಯೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇನ್ನು ಪ್ರಕರಣ ದಾಖಲಿಸಿಕೊಂಡ ಚಿಂತಾಮಣಿ ಪೊಲೀಸರು, ಎಸ್ಪಿ ಮಿಥುನ್ ಕುಮಾರ್ ಮತ್ತು ಡಿವೈಎಸ್ಪಿ ಲಕ್ಷ್ಮಯ್ಯ ಮಾರ್ಗದರ್ಶನದಲ್ಲಿ ಬಟ್ಲಹಳ್ಳಿ ಠಾಣಾಧಿಕಾರಿ ಪಾಪಣ್ಣ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.