ಬೆಂಗಳೂರು: ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಗೃಹಿಣಿ ಪ್ರಕರಣವನ್ನು ನಗರ ಪೊಲೀಸರು ಭೇದಿಸಿದ್ದು ಪತಿ ಮತ್ತು ಆತನ ಸ್ನೇಹಿತರನ್ನು ಬಂಧಿಸಲಾಗಿದೆ
ಕಳೆದ ಎರಡು ದಿನಗಳ ಹಿಂದಷ್ಟೆ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವಿನುತಾ ಎಂಬುವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಮೇಲ್ನೋಟಕ್ಕೆ ಹಿಮ್ಮುಖವಾಗಿ ಬಿದ್ದು ಮೃತಪಟ್ಟಂತೆ ಕಾಣಿಸಿದ್ದರೂ ಮೃತಳ ಕುಟುಂಬಸ್ಥರು ಮಾತ್ರ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊನೆಗೆ ಅದೊಂದು ಕೊಲೆ ಎಂಬುದನ್ನ ಬಯಲಿಗೆಳೆದಿದ್ದು, ಕಾರಣರಾದ ಆಕೆಯ ಗಂಡ ನರೇಂದ್ರ ಬಾಬು, ಸ್ನೇಹಿತರಾದ ಪ್ರಶಾಂತ್, ಜಗನ್ನಾಥನನ್ನು ಬಂಧಿಸಿದ್ದಾರೆ.
ವಿನುತಾ ಹಾಗೂ ನರೇಂದ್ರ ಬಾಬುಗೆ 11 ವರ್ಷದ ಮಗನಿದ್ದು, ಗಂಡ ಬ್ಯಾಂಕ್ ಉದ್ಯೋಗಿಯಾಗಿದ್ದಾನೆ. ಆದರೆ, 2013 ರಿಂದೀಚೆಗೆ ಗಂಡ ಹೆಂಡ್ತಿ ಸಂಬಂಧದಲ್ಲಿ ಬಿರುಕು ಮೂಡಿ, ಆರೋಪಿ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದ. ಆದರೆ ವಿನುತಾ, ಆತನ ಹೆಸರಿನಲ್ಲಿರುವ ಆಸ್ತಿ ಭಾಗವಾಗಿ ಪಾಲು ಸಿಗುವವರೆಗೂ ವಿಚ್ಚೇದನಕ್ಕೆ ತಡೆಯಾಜ್ಞೆ ತಂದಿದ್ದಳು. ಆದರೂ ಪರಸ್ಪರರು 20ಕ್ಕೂ ಅಧಿಕ ಬಾರಿ ದೂರು - ದಾವೆ ಅಂತಾ ಪೊಲೀಸರ ಮೊರೆ ಹೋಗಿದ್ದರು. ಕೊನೆಗೆ ಹೆಂಡತಿಯ ಕೊಲೆಗೆ ಸಂಚು ರೂಪಿಸಿದ್ದ ಗಂಡ ನರೇಂದ್ರ ಬಾಬು ಸ್ನೇಹಿತರಾದ ಪ್ರಶಾಂತ್ ಹಾಗೂ ಜಗನ್ನಾಥ ನೆರವು ಪಡೆದಿದ್ದ. ಪೂರ್ವ ಸಂಚಿನಂತೆ ಮೊದಲೇ ವಿನುತಾಳ ಮನೆ ಮೇಲೆ ಬಾಡಿಗೆ ಪಡೆದು ಉಳಿದಿಕೊಂಡಿದ್ದ ಆರೋಪಿಗಳು. ಇದೇ ತಿಂಗಳ 20ರಂದು ವಿನುತಾ ಇಲ್ಲದಿದ್ದಾಗ ಆಕೆಯ ಮನೆಯ ಬಾತ್ ರೂಂ ಕಿಟಕಿ ಮೂಲಕ ಮನೆಗೆ ಪ್ರವೇಶಿಸಿದ್ದಾರೆ. ಬಳಿಕ ಆಕೆ ಬರ್ತಿದ್ದಂತೆ ಇಬ್ಬರೂ ಸೇರಿ ಆಕೆಯ ತಲೆಗೆ ಕಬ್ಬಿಣದಿಂದ ಹೊಡೆದು ಸಾಯಿಸಿದ್ದರು. ಆದರೆ, ಅನುಮಾನದಿಂದ ಆರಂಭವಾಗಿ ಹಂತ ಹಂತವಾಗಿ ತನಿಖೆ ನೆಡೆಸಿದ ಪೊಲೀಸರು ಕೊನೆಗೆ ಗಂಡನ ಸಂಚು ಬಯಲಿಗೆಳೆದಿದ್ದಾರೆ.