ತಿರುವನಂತಪುರಂ: ಕೇರಳ ರಾಜ್ಯದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಐಎಎಸ್ ಅಧಿಕಾರಿಯೊಬ್ಬರನ್ನು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿದೆ.
ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ನಿನ್ನೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿ ಎಂ. ಶಿವಶಂಕರ್ರನ್ನು ಕೇಂದ್ರ ತನಿಖಾ ಸಂಸ್ಥೆಯಾದ ಇಡಿ (ಜಾರಿ ನಿರ್ದೇಶನಾಲಯ) ಅರೆಸ್ಟ್ ಮಾಡಿತ್ತು. ಕೊಚ್ಚಿ ಕಚೇರಿಯಲ್ಲಿ ಆರು ಗಂಟೆಗಳ ವಿಚಾರಣೆ ನಡೆಸಿ ಶಿವಶಂಕರ್ರನ್ನು ಬಂಧಿಸಿರುವ ಇಡಿ, ಅವರನ್ನು ಏಳು ದಿನಗಳ ಕಾಲ ತನ್ನ ಕಸ್ಟಡಿಗೆ ಪಡೆದುಕೊಂಡಿದೆ.
ಈ ಹಿಂದೆ ಪಲರಿವಟ್ಟಮ್ ಫ್ಲೈಓವರ್ ಹಗರಣ ಸಂಬಂಧ ಭ್ರಷ್ಟಾಚಾರ ಆರೋಪದ ಮೇಲೆ ಪಿಡಬ್ಲ್ಯುಡಿ ಮಾಜಿ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಟಿ ಒ ಸೂರಜ್ರನ್ನು ಬಂಧಿಸಲಾಗಿತ್ತು. ಆದರೆ ಬಂಧನದ ಸಮಯದಲ್ಲಿ ಸೂರಜ್ ಸೇವೆಯಿಂದ ನಿವೃತ್ತರಾಗಿದ್ದರು.
ಎಸ್‌ಎನ್‌ಸಿ ಲಾವಲಿನ್ ಪ್ರಕರಣದಲ್ಲಿ ಇಂಧನ ಇಲಾಖೆಯ ಮಾಜಿ ಕಾರ್ಯದರ್ಶಿ ಮೋಹನ ಚಂದ್ರನ್ ಆರೋಪಿಯೆಂದು ಸಿಬಿಐ ಹೇಳಿತ್ತು. ಕಲಾದಿ ಸಂಸ್ಕೃತ ವಿಶ್ವವಿದ್ಯಾಲಯದ ಭೂವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಆರ್.ರಾಮಚಂದ್ರನ್ ನಾಯರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ರಾಮಚಂದ್ರನ್ ನಾಯರ್ರನ್ನು 1997 ರಲ್ಲಿ ಅಂದಿನ ಮುಖ್ಯಮಂತ್ರಿ ಇ.ಕೆ.ನಾಯನಾರ್ ಸೇವೆಯಿಂದ ಅಮಾನತುಗೊಳಿಸಿದ್ದರು. ಬಳಿಕ ಈ ಪ್ರಕರಣದಲ್ಲಿ ಹೈಕೋರ್ಟ್ ರಾಮಚಂದ್ರನ್ರನ್ನು ಖುಲಾಸೆಗೊಳಿಸಿತ್ತು.
1994ರ ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಕೆ.ಕರುಣಕರನ್ ಅವರು ದಕ್ಷಿಣ ವಲಯ ಇನ್ಸ್ಪೆಕ್ಟರ್ ಜನರಲ್ ರಾಮನ್ ಶ್ರೀವಾಸ್ತವ ಅವರನ್ನು ಅಮಾನತುಗೊಳಿಸಿದ್ದರು.
ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಯಿಂದ ಅರೆಸ್ಟ್ ಆದ ಕೇರಳದ ಮೊದಲ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಆಗಿದ್ದು, ಸದ್ಯ ಇಡಿ ಕಸ್ಟಡಿಯಲ್ಲಿದ್ದಾರೆ.