ನವದೆಹಲಿ: ತನ್ನ ಪರವಾಗಿ ಆದೇಶ ಪಡೆಯಲು ವಿಚಾರಣಾ ನ್ಯಾಯಾಲಯದ ತೀರ್ಪಿನ ತಿದ್ದಿದ ಪ್ರತಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅಪರಾಧಿಗೆ ನ್ಯಾಯಾಲಯ ಶೋಕಾಸ್ ನೋಟಿಸ್ ನೀಡಿದೆ.
ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಅರೆಸ್ಟ್ ಆಗಿದ್ದ ಎಸ್. ಶಂಕರ್ ಎಂಬ ವ್ಯಕ್ತಿಗೆ ಆಂಧ್ರಪ್ರದೇಶದ ವಿಚಾರಣಾ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿತ್ತು. ಈ ತೀರ್ಪಿನ ತಪ್ಪಾದ ಪ್ರತಿಯೊಂದಿಗೆ ಶಂಕರ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅಪರಾಧಿಗೆ ಜೈಲು ಶಿಕ್ಷೆಯಾಗಿಲ್ಲ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇವಲ ದಂಡವನ್ನು ಮಾತ್ರ ವಿಧಿಸಲಾಗಿದೆ ಎಂದು ಶಂಕರ್ ಪರ ವಕೀಲರು ವಿಚಾರಣೆ ವೇಳೆ ವಾದ ಮಾಡಿದ್ದರು.
2019ರ ಜುಲೈ 23ರಂದು ಸುಪ್ರೀಂಕೋರ್ಟ್, ಅಪರಾಧಿ ಶಂಕರ್ಗೆ 1000 ರೂ. ದಂಡ ಮಾತ್ರ ವಿಧಿಸಿ ಪ್ರಕರಣದಿಂದ ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಶಂಕರ್, ತಪ್ಪು ಮಾಹಿತಿಯುಳ್ಳ ತೀರ್ಪಿನ ಪ್ರತಿಯನ್ನು ಸಲ್ಲಿಸಿ ಜೈಲು ಶಿಕ್ಷೆಯಿಂದ ಪಾರಾಗಿದ್ದಾರೆ ಎಂದು ಸುಪ್ರೀಂಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ವರದಿ ಸಲ್ಲಿಸಿದ್ದರು.
ಓದಿ: ದಶಕಗಳ ಸಮಸ್ಯೆಯನ್ನು ಒಂದೇ ಪತ್ರದ ಮೂಲಕ ಬಗೆಹರಿಸಿದ ಬಾಲಕಿ... ಇದಕ್ಕೆ ಪ್ರಧಾನಿ ಏನಂದ್ರು..?
ವರದಿಯ ಪರಿಶೀಲನೆ ನಡೆಸಿರುವ ಕೋರ್ಟ್, 2019ರ ಜುಲೈ 23ರ ಆದೇಶವನ್ನು ನಾವೇಕೆ ಹಿಂಪಡೆಯಬಾರದು? ಇದರ ವಿರುದ್ಧ ಏಕೆ ಸೂಕ್ತ ಕ್ರಮ ಕೈಗೊಳ್ಳಬಾರದು? ಎಂದು ಹೇಳಿ ಶಂಕರ್ಗೆ ಶೋಕಾಸ್ ನೋಟಿಸ್ ನೀಡಿದೆ.