ಬೆಂಗಳೂರು: ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸಿದ ಇಬ್ಬರು ರೌಡಿಶೀಟರ್ಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಿಭಾಗದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮಧುಸೂದನ್ ಯಾನೆ ಮಧುಕರ್, ಲಿಖಿನ್ ಬಿ.ವಿ. ಹಾಗೂ ನರೇಂದ್ರ ಯಾನೆ ನರು ಬಂಧಿತರು. ಆಗಸ್ಟ್ 25ರ ರಾತ್ರಿ ಸುಮಾರು 11.30 ಗಂಟೆಗೆ ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಮಂಜುನಾಥ ಅಲಿಯಾಸ್ ತಮ್ಮ ಮಂಜ ಹಾಗೂ ಬಿಲ್ಡರ್ ಒಬ್ಬರ ಮಗ ವರುಣ್ ಎಂಬಾತ ಊಟ ಮುಗಿಸಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ನರೇಂದ್ರ, ಮಧುಸೂದನ್ ಹಾಗೂ ಲಿಖಿನ್ ದ್ವಿಚಕ್ರ ವಾಹನಕ್ಕೆ ಗುದ್ದಿ ಕೆಳಗೆ ಬೀಳಿಸಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಡಿಸಿಪಿ ರೋಹಿಣಿ ಸಪೆಟ್ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು. ಆರೋಪಿಗಳು ಕನಕಪುರದ ಬಳಿ ತಲೆಮರೆಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಂಡ, ಕೊಲೆ ಆರೋಪಿಗಳನ್ನು ಬಂಧಿಸಿದೆ.
ಹತ್ಯೆಗೆ ಹಳೇ ವೈಷಮ್ಯವೇ ಕಾರಣ:
2017ರಲ್ಲಿ ಕನಕಪುರದ ರೌಡಿ ಟ್ಯಾಬ್ಲೆಟ್ ರಘು ಎಂಬಾತನನ್ನು ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಜುನಾಥ ಹಾಗೂ ಆತನ ಸಹಚರರು ಸೇರಿ ಕೊಲೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಟ್ಯಾಬ್ಲೆಟ್ ರಘುವಿನ ತಮ್ಮ ನರೇಂದ್ರ ಅಲಿಯಾಸ್ ನರು ಒಂದು ವರ್ಷದಿಂದ ಮಂಜುನಾಥನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು. ಟ್ಯಾಬ್ಲೆಟ್ ರಘುನನ್ನ ಕೊಲೆ ಮಾಡಿದ ದಿನದಿಂದ ಮಂಜುನಾಥನನ್ನ ಮುಗಿಸಲು ನರೇಂದ್ರ ಹೊಂಚು ಹಾಕಿದ್ದು ಮಾತ್ರವಲ್ಲದೆ, ಮುತ್ಯಲಮ್ಮ ಹಾಗೂ ಆಂಜನೇಯ ದೇವರ ಮೇಲೆ ಶಪಥ ಮಾಡಿದ್ದನೆಂದು ತನಿಖೆ ವೇಳೆ ತಿಳಿದು ಬಂದಿದೆ.
ಸದ್ಯ ಬಂಧಿತ ಆರೋಪಿಗಳ ಪೈಕಿ ಮಧುಸೂಧನ್ ಅಲಿಯಾಸ್ ಮಧುಕರ್ ಹಾಗೂ ಲಿಖಿನ್ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ಹಾಗೂ ಜೆಪಿ ನಗರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಟ್ಯಾಬ್ಲೆಟ್ ರಘು ತಮ್ಮ ನರೇಂದ್ರ ಅಲಿಯಾಸ್ ನರು ನ್ಯಾಯಾಲಯದ ಎದುರು ಶರಣಾಗಿದ್ದಾನೆ.
ಇನ್ನು ಈ ಕೃತ್ಯದಲ್ಲಿ ವಿನೋದ್ ಅಲಿಯಾಸ್ ಕೊತಿ, ಅಯ್ಯಪ್ಪ, ದೀಪು, ಮಂಜುನಾಥ ಅಲಿಯಾಸ್ ಸೋಡಾ ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.