ಬಸವಕಲ್ಯಾಣ: ದೇವರ ದರ್ಶನಕ್ಕೆಂದು ತೆರಳುತ್ತಿದ್ದ ಟೆಂಪೋ ವಾಹನ ಪಲ್ಟಿಯಾಗಿ ಒಬ್ಬ ಬಾಲಕ ಸ್ಥಳದಲ್ಲೇ ಮೃತಪಟ್ಟು, 10 ಕ್ಕೂ ಅಧಿಕ ಜನರಿಗೆ ಗಾಯವಾದ ಘಟನೆ ಹುಲಸೂರ ತಾಲೂಕಿನ ಹಾಲಳ್ಳಿ ಕ್ರಾಸ್ ಬಳಿ ನಡೆದಿದೆ.
ದೇವಣಿ ತಾಲೂಕಿನ ಕೌಠಾಳ ಗ್ರಾಮದ ಮಹಾದೇವ ನಿಡೆಬಾನೆ (13) ಮೃತ ಬಾಲಕ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ತಾಲೂಕಿನ ಕೌಠಾಳ ಗ್ರಾಮದಿಂದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಘೋರವಾಡಿಯಲ್ಲಿಯ ಪ್ರಸಿದ್ಧ ಇಸ್ಮಾಯಿಲ್ ಖಾದ್ರಿ ದೇವರ ದರ್ಶನಕ್ಕೆಂದು ಟೆಂಪೋ ವಾಹನದಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎನ್ನಲಾಗಿದೆ.
ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಹುಲಸೂರಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಗೌತಮ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.