ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಸದ್ಯ ಪೊಲೀಸರ ವಶದಲ್ಲಿದ್ದು, ತನ್ನ ಮಕ್ಕಳ ಭೇಟಿಗೆ ಮನವಿ ಮಾಡಿ ಕಣ್ಣೀರು ಹಾಕಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ನನ್ನ ಹೆಣ್ಣುಮಕ್ಕಳು ಕೆನಡಾದಲ್ಲಿ ಓದುತ್ತಿದ್ದಾರೆ, ನನ್ನ ಬಂಧನ ಆದ ಮೇಲೆ ಅವರನ್ನ ಯಾರೂ ನೋಡಿಕೊಳ್ತಿಲ್ಲ. ಅವರ ದಿನದ ಖರ್ಚಿಗೆ ಅವರು ಪರದಾಡ್ತಾ ಇರಬಹುದು. ಅಲ್ಲಿ ನನ್ನ ಮಕ್ಕಳಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಪ್ಲೀಸ್ ಒಮ್ಮೆ ನನಗೆ ನನ್ನ ಮಕ್ಕಳನ್ನ ತೋರಿಸಿ ಎಂದು ಕಣ್ಣೀರು ಹಾಕಿದ್ದಾನೆ ಅನ್ನೋ ಮಾಹಿತಿ ಸಿಸಿಬಿ ಮೂಲಗಳಿಂದ ಲಭ್ಯವಾಗಿದೆ.
ಸದ್ಯ ಪೊಲೀಸರ ಮಾಹಿತಿ ಪ್ರಕಾರ ರವಿ ಪೂಜಾರಿ ಬಂಧನವಾದ ನಂತರ ಕುಟುಂಬಸ್ಥರು ಆತನನ್ನು ಭೇಟಿಯಾಗಿಲ್ಲ. ಹೀಗಾಗಿ ರವಿ ಪೂಜಾರಿಗೆ ಖಿನ್ನತೆ ಕಾಡ್ತಿದೆ ಎಂದು ಹೇಳಲಾಗ್ತಿದೆ. ಸದ್ಯ ರವಿ ಪೂಜಾರಿಯನ್ನ ಮುಂಬೈ ಪೊಲೀಸರು ತಮ್ಮ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಆದರೆ ಬೆಂಗಳೂರಿನ ಬಹುತೇಕ ಪ್ರಕರಣಗಳು ಬಾಕಿ ಇರುವ ಕಾರಣ, ಆತನ ವಿರುದ್ಧದ ತನಿಖೆಯನ್ನು ರಾಜ್ಯ ಪೊಲೀಸರು ಮುಂದುವರೆಸಿದ್ದಾರೆ.