ಪುತ್ತೂರು: ಬನ್ನೂರು ನಿರ್ಪಾಜೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಬದಿಯ ಹಳೆ ಮನೆಯೊಂದರ ಕೊಟ್ಟಿಗೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಆಟೋ ಚಾಲಕನ ಶವ ಪತ್ತೆಯಾಗಿದೆ.
ಆಟೋ ಚಾಲಕನಾಗಿದ್ದ ಸುದರ್ಶನ್ (37) ಮೃತಪಟ್ಟವರು. ದಿ. ರಘುನಾಥ ರೈ ಮತ್ತು ವಿಮಲ ದಂಪತಿಯ ಪುತ್ರ ಸುದರ್ಶನ್ ಆಟೋ ಚಾಲಕನಾಗಿದ್ದು, ಕಳೆದ ಕೊರೊನಾ ಲಾಕ್ ಡೌನ್ ಬಳಿಕ ಮನೆಯಲ್ಲೇ ಇದ್ದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಆ.30 ರಂದು ಸ್ಥಳೀಯರಿಗೆ ಸುದರ್ಶನ್ ರೈ ಅವರ ಮನೆಯಿಂದ ದುರ್ನಾತ ಬೀರುತ್ತಿರುವ ಕುರಿತು ಪರಿಶೀಲಿಸಿದಾಗ ಮನೆಯ ಕೊಟ್ಟಿಗೆಯಲ್ಲಿ ಸುದರ್ಶನ್ ಅವರ ಮೃತ ದೇಹ ಚೇರ್ನಲ್ಲಿ ಕುಳಿತ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ.
ಘಟನೆಯ ಕುರಿತು ಪೊಲೀಸರಿಗೆ ಮತ್ತು ಸುದರ್ಶನ್ ಅವರ ತವರು ಮನೆಯಲ್ಲಿರುವ ಪತ್ನಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣೆಯ ಪೊಲೀಸರು, ಸ್ಥಳೀಯ ನಗರಸಭಾ ಸದಸ್ಯೆ ಗೌರಿ ಬನ್ನೂರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಬ್ಲಾಕ್ ಕಾಂಗ್ರೆಸ್ ಸೇವಾದಳದ ಜೋಕಿಂ ಡಿಸೋಜ ಸೇರಿದಂತೆ ಆನೇಕರು ಆಗಮಿಸಿದ್ದಾರೆ.
ಮೃತರು ಪತ್ನಿ ಶಶಿಕಲಾ, ಒಂದೂವರೆ ವರ್ಷದ ಗಂಡು ಮಗು ಮತ್ತು ಸಹೋದರಿಯರಾದ ಪ್ರಮೀಳಾ, ಜಯಶ್ರೀ ಅವರನ್ನು ಅಗಲಿದ್ದಾರೆ.
ಅರ್ಧದಲ್ಲಿ ನಿಂತಿರುವ ಹೊಸ ಮನೆ ಕೆಲಸ:
ಸುದರ್ಶನ್ ರೈ ಅವರ ತಾಯಿಯ ಹೆಸರಿನಲ್ಲಿರುವ ಜಾಗದಲ್ಲಿ ಸರ್ಕಾರದಿಂದ ಸಿಕ್ಕಿದ ಸೌಲಭ್ಯದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕೆಲ ದಿನಗಳ ಹಿಂದೆ ತಾಯಿ ನಿಧನವಾದ ಹಿನ್ನೆಲೆ ಮನೆ ನಿರ್ಮಾಣದ ಕಾರ್ಯವೂ ಸ್ಥಗಿತಗೊಂಡಿತ್ತು.