ಬೀದರ್: ಜಿಲ್ಲಾ ಕೇಂದ್ರ ಕಾರಾಗೃಹದ ಗೋಡೆ ಹಾರಿ ಎಸ್ಕೇಪ್ ಆಗಿದ್ದ ನಟೋರಿಯಸ್ ಕೈದಿಯನ್ನು 24 ಗಂಟೆಯಲ್ಲೇ ಅರೆಸ್ಟ್ ಮಾಡಿರುವ ಘಟನೆ ಭಾಲ್ಕಿ ಪಟ್ಟಣದ ದಾದರ ಢಾಬಾ ಬಳಿ ನಡೆದಿದೆ.
ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ರಾಘವೇಂದ್ರ ಎಂಬಾತ ಸೋಮವಾರ ಸಂಜೆ ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದಾನೆ. ನಂತರ ಸ್ಥಳೀಯ ಪೊಲೀಸರು, ಸಿಬ್ಬಂದಿ ಎಷ್ಟೇ ಹುಡುಕಾಟ ನಡೆಸಿದರೂ ಆರೋಪಿ ಸಿಗಲಿಲ್ಲ. ಹೀಗಾಗಿ ಜಿಲ್ಲೆಯ ಎಲ್ಲಾ ಠಾಣೆಯ ಪೊಲೀಸರು ಸಾಮೂಹಿಕವಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಈ ವೇಳೆ ಭಾಲ್ಕಿ ಪಟ್ಟಣದ ದಾದರ ಢಾಬಾ ಬಳಿಯಲ್ಲಿ ಪೊಲೀಸರ ಕಣ್ಣಿಗೆ ಆರೋಪಿ ಕಾಣಿಸಿಕೊಂಡಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ನಟೋರಿಯಸ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್., ಡಿವೈಎಸ್ಪಿ ಡಾ. ದೇವರಾಜ್, ಸಿಪಿಐಗಳಾದ ರಮೇಶಕುಮಾರ್ ಮೈಲೂರಕರ, ವಿಜಯಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಯ ಈ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.