ಬೆಂಗಳೂರು: ಪತ್ನಿಯನ್ನ ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕನಿಗೆ ಕಂಠ ಪೂರ್ತಿ ಕುಡಿಸಿ ಕೊಲೆ ಮಾಡಿದವರನ್ನ ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆಯ ಪತಿ ಬಾಲಾಜಿ ಸೇರಿದಂತೆ 6 ಜನ ಆರೋಪಿಗಳು ಬಂಧಿತರಾಗಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ತಿಪ್ಪಸಂದ್ರದ ನಿವಾಸಿ ರಾಜದೊರೈ ಎಂಬಾತ, ಆರೋಪಿ ಬಾಲಾಜಿ ಪತ್ನಿಯನ್ನ ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ವಿಚಾರ ಗಂಡನಿಗೆ ತಿಳಿದು ಮದುವೆ ಬಗ್ಗೆ ಚರ್ಚೆ ಮಾಡುತ್ತೇನೆ ಬಾ ಎಂದು ಕರೆದು, ಸ್ನೇಹಿತರ ಜೊತೆ ಸೇರಿ ರಾಜದೊರೈ ಅವನನ್ನು ಕೊಲೆ ಮಾಡಿದ್ದಾರೆ. ಇನ್ನು ಮಗ ಕಾಣದೇ ಇದ್ದಾಗ, ಈ ಬಗ್ಗೆ ಕೊಲೆಯಾದ ರಾಜದೊರೈ ತಂದೆ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದ ಕಾರಣ, ಪ್ರಕರಣದ ತನಿಖೆ ಮಾಡಿದ್ದಾರೆ. ಆರೋಪಿ ಬಾಲಾಜಿ 2 ವರ್ಷಗಳ ಹಿಂದೆ ಮದುವೆಯಾಗಿ ಪತ್ನಿ ಜೊತೆ ಲಿಂಗರಾಜಪುರದಲ್ಲಿ ನೆಲೆಸಿದ್ದ. ಚಾಕೊಲೇಟ್ ಪೂರೈಕೆ ವಾಹನದ ಚಾಲಕನಾಗಿ ಬಾಲಾಜಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಜೆ.ಬಿ. ನಗರದಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಮಳಿಗೆಯಲ್ಲಿ ಕೊಲೆಯಾದ ರಾಜದೊರೈ ಸಹ ಕೆಲಸಕ್ಕಿದ್ದ. ಕೆಲ ದಿನಗಳಿಂದ ಬಾಲಾಜಿ ಪತ್ನಿ ಹಿಂದೆ ಬಿದ್ದಿದ್ದ ರಾಜದೊರೈ, ತನ್ನನ್ನು ಮದುವೆ ಆಗುವಂತೆ ಆಕೆಯನ್ನು ಒತ್ತಾಯಿಸಿದ್ದ. ಅದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದರೂ, ಹಿಂದೆ ಬಿದ್ದು ಪೀಡಿಸುತ್ತಿದ್ದ.
ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ನಿಷೇಧ: ಸಚಿವ ಆರ್.ಅಶೋಕ್
ಇದರಿಂದ ಬೇಸತ್ತ ಮಹಿಳೆ, ಕೊನೆಗೆ ಪತಿ ಬಳಿ ಈ ಬಗ್ಗೆ ಹೇಳಿಕೊಂಡಿದ್ದಳು. ವಿಷಯ ತಿಳಿದು ಕೋಪಗೊಂಡ ಬಾಲಾಜಿ, ಪತ್ನಿ ಸಹವಾಸಕ್ಕೆ ಬಾರದಂತೆ ರಾಜದೊರೈಗೆ ಎಚ್ಚರಿಕೆ ನೀಡಿದ್ದ. ಆದರೂ ರಾಜದೊರೈ ಕುಚೇಷ್ಠೆ ಮುಂದುವರಿಸಿ ಮದುವೆ ಆಗುವಂತೆ ಮಹಿಳೆಯನ್ನು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಬಾಲಾಜಿ, ತನ್ನ ಸ್ನೇಹಿತರ ಜತೆಗೂಡಿ ಆತನ ಕೊಲೆಗೆ ನಿರ್ಧರಿಸಿದ್ದಾನೆ.
ನ.29 ರಂದು ಲಿಂಗರಾಜಪುರದ ಮನೆಯಲ್ಲಿ ಮದ್ಯದ ಪಾರ್ಟಿ ನೆಪ ಹೇಳಿ, ಮಾತುಕತೆ ನಡೆಸೋಣ ಬಾ ಅಂತ ರಾಜದೊರೈ ಅವನನ್ನು ಆರೋಪಿಗಳು ಕರೆಸಿದ್ದರು.
ಬಳಿಕ ಕಂಠಪೂರ್ತಿ ಮದ್ಯ ಕುಡಿಸಿ ಕೊಲೆ ಮಾಡಿದ್ದಾರೆ. ಮರುದಿನ ಶವ ಮೂಟೆಕಟ್ಟಿ ರಾಮಮೂರ್ತಿನಗರದ ಸರ್ವಿಸ್ ರಸ್ತೆಯಲ್ಲಿ ಎಸೆದು ತಮಿಳುನಾಡಿಗೆ ಪರಾರಿಯಾಗಿದ್ದರು.
ಮನೆಯಿಂದ ಹೊರಹೋಗಿದ್ದ ಮಗ ವಾಪಸ್ ಬಾರದೇ ಇದ್ದಾಗ, ರಾಜದೊರೈ ಪೋಷಕರು ಜೀವನ್ ಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ನ. 29ರ ಸಂಜೆ, ಆಟೋದಲ್ಲಿ ರಾಜದೊರೈನನ್ನು ಆರೋಪಿ ಬಾಲಾಜಿ ಲಿಂಗರಾಜಪುರಕ್ಕೆ ಕರೆದೊಯ್ದ ಮಾಹಿತಿ ಸಿಕ್ಕಿದೆ. ಬಾಣಸವಾಡಿ ಪೊಲೀಸರಿಗೆ ಜೀವನ್ ಭೀಮಾನಗರ ಪೊಲೀಸರು ಈ ಬಗ್ಗೆ ಮಾಹಿತಿ ತಿಳಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಬಾಣಸವಾಡಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮುರಳಿ ನೇತೃತ್ವದ ತಂಡ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಬಾಲಾಜಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆರೋಪಿ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದು, ಸದ್ಯ ಆರೋಪಿಗಳನ್ನ ಬಂಧಿಸಿ ಬಾಣಸವಾಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಓದಿ: ಅಪರಿಚಿತ ಮಹಿಳೆಯಿಂದ ಪೊಲೀಸ್ ಇನ್ಸ್ಪೆಕ್ಟರ್ಗೆ ವಿಡಿಯೋ ಕಾಲ್: ಹಣಕ್ಕಾಗಿ ಬೆದರಿಕೆ