ಚಾಮರಾಜನಗರ: ಅಕ್ರಮವಾಗಿ ಕೇರಳದ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗುಂಡ್ಲುಪೇಟೆ ಹೊರವಲಯದಲ್ಲಿ ಬಂಧಿಸಲಾಗಿದೆ.
ಚಾಮರಾಜನಗರದ ಸುಂದರ್ ಹಾಗೂ ನಂಜುಂಡಸ್ವಾಮಿ ಬಂಧಿತರು. ಕೇರಳ ಲಾಟರಿ ಟಿಕೆಟ್ಗಳನ್ನು ತಂದು ಗುಂಡ್ಲುಪೇಟೆ ಹೊರವಲಯದಲ್ಲಿ ಪರಿಚಿತರಿಗೆ, ಖಾಯಂ ಗಿರಾಕಿಗಳಿಗೆ ಮಾರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಪೊಲೀಸರು ದಾಳಿ ನಡೆಸಿದ್ದರು.
ಬಂಧಿತರಿಂದ 350ಕ್ಕೂ ಹೆಚ್ಚು ಲಾಟರಿ ಟಿಕೆಟ್ಗಳು, 3 ಸಾವಿರ ನಗದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಜಿಲ್ಲೆ ಕೇರಳದ ಗಡಿಗೆ ಹೊಂದಿಕೊಂಡಿರುವ ಪರಿಣಾಮ ಗಡಿ ಭಾಗದಲ್ಲಿ ಲಾಟರಿ ಮಾರಾಟ ದಂಧೆ ಅವ್ಯಾಹತವಾಗಿ ರೂಪುಗೊಂಡಿತ್ತು ಎಂಬುದು ತಿಳಿದು ಬಂದಿದೆ.
ಈಗ ಪೊಲೀಸರು ಕೂಲಿ ಕಾರ್ಮಿಕರ ಅನ್ನಕ್ಕೆ ಕಲ್ಲು ಹಾಕುವ ಖತರ್ನಾಕ್ಗಳ ಹೆಡೆಮುರಿ ಕಟ್ಟಿದ್ದು, ಮತ್ತಷ್ಟು ಚುರುಕಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.