ಚಂದ್ರಪುರ (ಮಹಾರಾಷ್ಟ್ರ): ಇಲ್ಲಿನ ಸೋಮನಾಥಪುರ ಗ್ರಾಮದಲ್ಲಿರುವ ಆನಂದವನ ಆಶ್ರಮದಲ್ಲಿನ ಕುಷ್ಠರೋಗಿಗಳ ಆರೈಕೆ ಕೇಂದ್ರದಿಂದ ನಾಪತ್ತೆಯಾಗಿದ್ದ ಸಿಬ್ಬಂದಿ ಇಂದು ರಕ್ತಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಆರೈಕೆ ಕೇಂದ್ರದಲ್ಲಿ 2008ರಿಂದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನಾರಾಯಣ ನಿಕೋಡೆ (75) ಜನವರಿ 20ರಿಂದ ಕಾಣೆಯಾಗಿದ್ದರು. ಇಂದು ಬೆಳಗ್ಗೆ ಅವರ ಮನೆಯ ಸಮೀಪವಿರುವ ಕೊಳವೊಂದರಲ್ಲಿ ಮೃತದೇಹ ಪತ್ತೆಯಾಗಿದೆ. ದೇಹದ ಮೇಲೆ ಚಾಕುವಿನಿಂದ ಇರಿದ ಗುರುತುಗಳಿದ್ದು, ಇದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನಿಂದ ಹೊಡೆದ ಪತಿರಾಯ
ಕಳೆದ ನವೆಂಬರ್ನಲ್ಲಿ ಖ್ಯಾತ ಸಮಾಜ ಸೇವಕ ಬಾಬಾ ಅಮ್ಟೆ ಅವರ ಮೊಮ್ಮಗಳಾದ ಡಾ. ಶೀತಲ್ ಆಮ್ಟೆ ಅವರು ಆನಂದವನ ಆಶ್ರಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಶೀತಲ್ ಆಮ್ಟೆ, ಕುಷ್ಠರೋಗಿಗಳಿಗಾಗಿ ಸೇವೆ ಸಲ್ಲಿಸುವ ಮಹಾರೋಗಿ ಸೇವಾ ಸಮಿತಿಯ ಸಿಇಒ ಆಗಿದ್ದರು. ಇದೀಗ ಸೆಕ್ಯುರಿಟಿ ಗಾರ್ಡ್ ಕೊಲೆ ಹಾಗೂ ಶೀತಲ್ ಆಮ್ಟೆ ಸಾವಿಗೆ ಸಂಬಂಧವಿದೆ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.