ನವದೆಹಲಿ: ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಥ್ರಾಸ್ ಪ್ರಕರಣವನ್ನು ಇದೊಂದು 'ಮರ್ಯಾದಾ ಹತ್ಯೆ' ಎಂದು ವಕೀಲ ಎಪಿ ಸಿಂಗ್ ಹೇಳಿಕೆ ನೀಡಿದ್ದಾರೆ.
2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಪರ ವಕೀಲರಾಗಿದ್ದ ಎಪಿ ಸಿಂಗ್, ಇದೀಗ ಉತ್ತರ ಪ್ರದೇಶದ ಹಥ್ರಾಸ್ ಪ್ರಕರಣದ ನಾಲ್ವರು ಆರೋಪಿಗಳ ಪರ ವಾದ ಮಂಡನೆ ಮಾಡಲು ಸಜ್ಜಾಗಿದ್ದಾರೆ.
ಹಥ್ರಾಸ್ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಸಂದೀಪ್ ಸಿಂಗ್, ಹಥ್ರಾಸ್ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದು, ನಾವೆಲ್ಲರೂ ನಿರಪರಾಧಿಗಳು ಮತ್ತು ಸಂತ್ರಸ್ತೆಯ ಸಹೋದರ ಇಲ್ಲಿ ಪ್ರಮುಖ ಆರೋಪಿ. ಸಂದೀಪ್ ಸಿಂಗ್ ಜೊತೆ ಮೃತ ಯುವತಿ ಸಂಬಂಧ ಹೊಂದಿದ್ದಳು. ವಿಚಾರ ತಿಳಿದ ಆಕೆಯ ಸಹೋದರ ಯುವತಿಯನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದಾನೆ.
ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಪಿ ಸಿಂಗ್, ಇದೊಂದು ಮರ್ಯಾದಾ ಹತ್ಯೆ ಎಂಬುದು ಈ ಪತ್ರದ ಮೂಲಕವೇ ಸ್ಪಷ್ಟವಾಗಿದೆ. ಹೀಗಾಗಿ ಈ ಪತ್ರವನ್ನು ತನಿಖೆಗೆ ಒಳಪಡಿಸಬೇಕು. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೆಲವು ಸಾಕ್ಷ್ಯಾಧಾರಗಳನ್ನು ಪತ್ತೆಹಚ್ಚಿದ್ದಾರೆ. ಅಪರಾಧ ನಡೆದ ಸ್ಥಳ ಅಂದರೆ ಯುವತಿಯ ಸಹೋದರ ಕೊಲೆ ಮಾಡುವ ಸಂದರ್ಭದಲ್ಲಿ ಯುವತಿಯ ತಾಯಿ ಮಾತ್ರವಲ್ಲದೇ ಗ್ರಾಮದ ಕೆಲವು ಜನರು ಸಹ ಇದ್ದರು. ಪೊಲೀಸರು ಅವರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು, ಆಕೆ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಮೃತದೇಹವನ್ನು ಸಂತ್ರಸ್ತೆಯ ಕುಟುಂಬಕ್ಕೆ ಹಸ್ತಾಂತರಿಸದೇ ಇತ್ತೀಚೆಗೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಿರ್ಭಯಾ ಪರ ವಕೀಲೆಯಾಗಿದ್ದ ಸೀಮಾ ಕುಶ್ವಾಹ ಅವರು ಹಥ್ರಾಸ್ ಸಂತ್ರಸ್ತೆಯ ಪರವಾಗಿ ಹೋರಾಡಲಿದ್ದರೆ, ನಿರ್ಭಯಾ ಅಪರಾಧಿಗಳ ಪರ ವಕೀಲರಾಗಿದ್ದ ಎಪಿ ಸಿಂಗ್ ಹಥ್ರಾಸ್ ಆರೋಪಿಗಳ ಪರ ವಾದ ಮಂಡನೆ ಮಾಡಲಿದ್ದಾರೆ.