ಬೆಂಗಳೂರು: ಕೋಟ್ಯಂತರ ರೂ.ಸಾಲ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ವಂಚನೆ ಮಾಡಿರುವ ಪ್ರಕರಣ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಕೆಎಸ್ಎಫ್ಸಿ ಬ್ಯಾಂಕ್ ಮ್ಯಾನೇಜರ್ ಸೇರಿ 6 ಮಂದಿ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬ್ಲೂ ಕ್ಲಿಪ್ ಆಪರೇಲ್ಸ್ ಇಂಡಿಯಾ ಪ್ರೈವೇಟ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ವಂಚನೆಗೊಳಗಾದ ವ್ಯಕ್ತಿ. ಕಂಪನಿಯನ್ನು ಅಭಿವೃದ್ಧಿ ಪಡಿಸಲು ಹಣದ ಅವಶ್ಯಕತೆ ಇರುವ ಕಾರಣ 2019 ರಲ್ಲಿ ನಗರದ ಕೆಎಸ್ಎಫ್ಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ 20 ಕೋಟಿ ರೂ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್ ನವರು ಲೋನ್ ನೀಡಲು ಆಗುವುದಿಲ್ಲ ಎಂದು ಅರ್ಜಿ ತಿರಸ್ಕರಿಸಿದ್ದರು. ಇದೇ ವೇಳೆ, ಅದೇ ಬ್ಯಾಂಕ್ನ ಅಸಿಸ್ಟೆಂಟ್ ಮ್ಯಾನೇಜರ್ ವೆಂಕಟೇಶಪ್ಪ ಅವರ ಪರಿಚಯ ಮಾಡಿಕೊಂಡಿದ್ದರು. ಇವರು ಪರಿಚಯಸ್ಥರಿಂದ 20 ಕೋಟಿ ರೂ. ಸಾಲ ಕೊಡಿಸುವುದಾಗಿ ತಿಳಿಸಿದ್ದಾರೆ.
ಇದಕ್ಕೆ ಸಮ್ಮತಿ ಸೂಚಿಸಿದಾಗ ವೆಂಕಟೇಶಪ್ಪ ಹಾಗೂ ಪರಿಚಯಸ್ಥ ತ್ಯಾಗರಾಜ್ ತಮಿಳುನಾಡಿನ ಆರ್ಜಿಬಿ ಫೈನಾನ್ಸ್ನಿಂದ ಹಣ ಕೊಡಿಸುವುದಾಗಿ ನಂಬಿಸಿದ್ದಾರೆ. ಹಾಗೆ ಲೋನ್ ಕೊಡಿಸುವುದಕ್ಕೆ ಶೇ 2ರಷ್ಟು ಕಮಿಷನ್ ಕೊಡುವಂತೆ ತಿಳಿಸಿದ್ದಾರೆ. ಇದಕ್ಕೆ ಸಮ್ಮತಿಸಿದ ಮ್ಯಾನೇಜರ್ 45 ಲಕ್ಷ ರೂ. ಕಮಿಷನ್ ನೀಡಿದ್ದಾರೆ. ಹಣ ಪಡೆದ ಬಳಿಕ ಇವರಿಬ್ಬರು ಎಸ್ಕೇಪ್ ಆಗಿದ್ದಾರೆ.
ಮೋಸ ಹೋದ ಕಾರಣ ಮ್ಯಾನೇಜರ್ ವೆಂಕಟೇಶಪ್ಪ, ಜಾನ್ ಬಾಬ್, ಬಾಲಾಜಿ, ತ್ಯಾಗರಾಜ್ ಹಾಗೂ ದಿನೇಶ್ ಎಂಬುವವರ ವಿರುದ್ಧ ಅವರು ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ.